ಬೀದರ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕಿರು ಉತ್ಪಾದನಾ ಯಂತ್ರಗಳ ವಿತರಣೆ ಮೂಲಕ ಜಿಲ್ಲೆಯ 131 ಫಲಾನುಭವಿಗಳಿಗೆ ಸ್ವ-ಉದ್ಯೋಗಕ್ಕೆ ನೆರವಾಗಿದೆ.
ನಗರದ ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಸ್ವಯಂ ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ಒಟ್ಟು 2.5 ಕೋಟಿ ಮೊತ್ತದ ಪೇಪರ್ ಪ್ಲೇಟ್, ದಾಲ್ ಮಿಲ್, ಬೇಕರಿ, ನಮಕೀನ್ ಸೇರಿದಂತೆ 12 ಬಗೆಯ ಕಿರು ಉತ್ಪಾದನಾ ಯಂತ್ರಗಳನ್ನು ವಿತರಿಸಲಾಯಿತು.
ಕಲ್ಯಾಣ ಕರ್ನಾಟಕ ಸಂಘದ ನಿರ್ದೇಶಕಿ, ಸ್ವಯಂ ಉದ್ಯೋಗ ಯೋಜನೆ ಉಪ ಸಮಿತಿಯ ಅಧ್ಯಕ್ಷೆ ಮಂಜುಳಾ ಡೋಳೆ ಮಾತನಾಡಿ, ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಎತ್ತರಿಸಲು ನೆರವಾಗುವುದೇ ಕಿರು ಉತ್ಪಾದನಾ ಘಟಕಗಳ ವಿತರಣೆಯ ಉದ್ದೇಶವಾಗಿದೆ. ಸಂಘದ ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯಂತ್ರಗಳ ಮೇಲೆ ಶೇ.75 ಹಾಗೂ ಇತರಿಗೆ ಶೇ.70 ಸಬ್ಸಿಡಿ ಇದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅಧ್ಯಕ್ಷತೆ ವಹಿಸಿ, ಸಂಘವು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಿಕ್ಷಣ, ಕೃಷಿ, ಮಹಿಳಾ, ಯುವ ಸಬಲೀಕರಣ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದ ಸಮಗ್ರ ವಿಕಾಸಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಎಂಟೂ ತಾಲೂಕುಗಳ ಆಯ್ಕೆ ಮಾಡಲಾದ ಬಡ ಫಲಾನುಭವಿಗಳಿಗೆ ಕಿರು ಉತ್ಪಾದನಾ ಯಂತ್ರಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಯಂತ್ರಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು. ಇತರರಿಗೂ ಉದ್ಯೋಗ ಕಲ್ಪಿಸಬೇಕು ಎಂದು ತಿಳಿಸಿದ ಅವರು, ಸಂಘವು ಕಿರು ಉತ್ಪಾದನಾ ಯಂತ್ರಗಳ ಮೂಲಕ ಬಡವರ ಬದುಕಿಗೆ ಆಸರೆಯಾಗಿದೆ ಎಂದು ಫಲಾನುಭವಿಗಳು ತಿಳಿಸಿದರು.
ಪ್ರವರ್ಧ ಸಂಸ್ಥೆಯ ಸಿಇಒ ಮಲ್ಲಿಕಾರ್ಜುನ ಕೌಜಲಗಿ, ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುನೀತ್ ಸಾಳೆ, ಸಂಘದ ಜಿಲ್ಲಾ ಸಂಯೋಜಕ ಬಸವರಾಜ ಅಷ್ಟಗಿ, ಪ್ರಶಾಂತ ಸಿಂಧೆ, ಕಲ್ಪನಾ, ಸಚಿನ್ ನಾಗೂರೆ ಮೊದಲಾದವರು ಉಪಸ್ಥಿತರಿದ್ದರು.