Advertisement

ಕೃಷಿ ಮೂಲಸೌಕರ್ಯ ನಿಧಿಯಡಿ 13 ಸಾವಿರ ಕೋಟಿ ರೂ. ಮೊತ್ತದ ಯೋಜನೆ: ಸಚಿವ ತೋಮರ್‌

09:58 PM Jul 15, 2022 | Team Udayavani |

ಬೆಂಗಳೂರು: ಕೃಷಿ ವಲಯಕ್ಕೆ ಪೂರಕವಾದ ವಿನೂತನ ಯೋಜನೆಗಳಿಗೆ ಹಣಕಾಸು ಸೌಲಭ್ಯ ಒದಗಿಸುವ ಕೇಂದ್ರದ “ಕೃಷಿ ಮೂಲಸೌಕರ್ಯ ನಿಧಿ’ ಅಡಿ ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಒಟ್ಟಾರೆ 23 ಸಾವಿರ ಕೋಟಿ ಮೊತ್ತದ ವಿವಿಧ ಪ್ರಕಾರದ ಪ್ರಸ್ತಾವನೆಗಳು ಸ್ವೀಕರಿಸಲಾಗಿದ್ದು, ಈ ಪೈಕಿ 13 ಸಾವಿರ ಕೋಟಿ ಮೊತ್ತದ ಯೋಜನೆಗಳು ಪರಿಗಣನೆ ಹಂತದಲ್ಲಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದರು.

Advertisement

“ಶೈತ್ಯಾಗಾರ, ಗೋದಾಮುಗಳು ಸೇರಿದಂತೆ ಕೊಯ್ಲೋತ್ತರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2020ರಲ್ಲಿ ಈ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಿದೆ. ಇದರಡಿ ಬ್ಯಾಂಕ್‌ಗಳ ಮೂಲಕ ಒಂದು ಲಕ್ಷ ಕೋಟಿ ರೂ.ವರೆಗೂ ಹಣಕಾಸು ನೆರವು ನೀಡಲು ಅವಕಾಶ ಇದೆ. ಇದರಲ್ಲಿ ಈವರೆಗೆ 23 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇದರಲ್ಲಿ 13 ಸಾವಿರ ಕೋಟಿ ಮೊತ್ತದ ಯೋಜನೆಗಳು ಅನುಮೋದನೆಯ ಹಲವು ಹಂತಗಳಲ್ಲಿದ್ದು, ಈ ಪೈಕಿ ಒಂಬತ್ತು ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಬ್ಯಾಂಕ್‌ಗಳ ಮೂಲಕ ಹಣ ಬಿಡುಗಡೆ ಆಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದವರಾರೂ ದೊಡ್ಡ ಕಂಪೆನಿಗಳ ಮಾಲಿಕರಲ್ಲ. ರೈತರು, ರೈತ ಉತ್ಪಾದಕ ಸಂಘಗಳಾಗಿವೆ. ವಿನೂತನ ಯೋಜನೆಗಳಿಗೆ ಈ ನಿಧಿ ಅಡಿ ವೇದಿಕೆ ಕಲ್ಪಿಸಲಾಗುತ್ತದೆ. ಬ್ಯಾಂಕ್‌ಗಳ ಮೂಲಕ ಕನಿಷ್ಠ ಬಡ್ಡಿದರ (ಶೇ. 3)ದಲ್ಲಿ ಸಾಲಸೌಲಭ್ಯ ಕಲ್ಪಿಸಲಾಗುತ್ತದೆ. ಯೋಜನೆ ಅವಧಿ 2025-26ರವರೆಗೆ ಇರಲಿದೆ ಎಂದರು.

ಕೃಷಿ ರಫ್ತು 3.75 ಲಕ್ಷ ಕೋಟಿ
ಇನ್ನು ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ 3.75 ಲಕ್ಷ ಕೋಟಿ ರೂ. ತಲುಪಿದ್ದು, ಇದರಲ್ಲಿ ಬಹುತೇಕ ಸಾವಯವ ಉತ್ಪನ್ನಗಳಾಗಿವೆ ಎಂದ ನರೇಂದ್ರಸಿಂಗ್‌ ತೋಮರ್‌, ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ ನೈಸರ್ಗಿಕ ಕೃಷಿ ಹಾಗೂ 38 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಕೃಷಿ ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ಅಡುಗೆ ಎಣ್ಣೆ ಆಮದು ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ರೂಪಿಸಲು ಉದ್ದೇಶಿಸಿದೆ. ಪ್ರಸ್ತುತ ಮೂರು ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬೆಳೆಯಲಾಗುತ್ತಿದ್ದು, 2025ರ ವೇಳೆಗೆ ಬಿತ್ತನೆ ಪ್ರದೇಶವನ್ನು ದುಪ್ಪಟ್ಟು ಅಂದರೆ ಆರು ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸುವ ಗುರಿ ಇದೆ ಎಂದು ತಿಳಿಸಿದರು.

Advertisement

ಹತ್ತು ಸಾವಿರ ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಗಳ ರಚನೆ ಮತ್ತು ಉತ್ತೇಜನಕ್ಕಾಗಿ ಕೇಂದ್ರ ವಲಯದ ಯೋಜನೆ ಅಡಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದುವರೆಗೆ ಸುಮಾರು 1,018 ರೈತ ಉತ್ಪಾದಕ ಸಂಘಗಳಿಗೆ 38 ಕೋಟಿಗೂ ಅಧಿಕ ಈಕ್ವಿಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ 3.21 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲ ಆಗಲಿದೆ. ಉದ್ದೇಶಿತ ಈ ಯೋಜನೆ ಅಡಿ ಮೂರು ವರ್ಷಗಳ ಅವಧಿಗೆ ಪ್ರತಿ ರೈತ ಉತ್ಪಾದಕ ಸಂಸ್ಥೆಗೆ 18 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ. ಪಾಟೀಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next