Advertisement

ಸೇನಾ ಪ್ರಹಾರ ಉಗ್ರ ಸಂಹಾರ

06:00 AM Apr 02, 2018 | Team Udayavani |

 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ಸೇನಾಪಡೆ ನಡೆಸಿದ ಮೂರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 13 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಒಬ್ಬನನ್ನು ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ ಮೂವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರೆ, ನಾಲ್ವರು ನಾಗರಿಕರು ಅಸುನೀಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ಭಾರೀ ಹಿನ್ನಡೆ ಉಂಟಾದ ಕಾರ್ಯಾಚರಣೆ ಇದಾಗಿದೆ.

Advertisement

ಹತರಾಗಿರುವ ಉಗ್ರರೆಲ್ಲರೂ ಜಮ್ಮು ಮತ್ತು ಕಾಶ್ಮೀರಕ್ಕೇ ಸೇರಿದವರಾಗಿದ್ದಾರೆ. ಲಷ್ಕರ್‌-ಎ-ತೊಯ್ಬಾ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಜತೆ ಗುರುತಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಉಗ್ರ ಸಂಘಟನೆಯ ಸ್ಥಳೀಯ ಉನ್ನತ ನಾಯಕರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿ.ಜಿ.ಪಿ. ಎಸ್‌.ಪಿ. ವೇದ್‌ ತಿಳಿಸಿದ್ದಾರೆ.

ಶೋಪಿಯಾನ್‌ನಲ್ಲಿ ಕಾರ್ಯಚರಣೆ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ದ್ರಾಗ್ಗಡ್‌ ಗ್ರಾಮದಲ್ಲಿ ಉಗ್ರರ ವಿರುದ್ಧ ಶನಿವಾರ ರಾತ್ರಿಯಿಂದೀಚೆಗೆ ಕಾರ್ಯಾಚರಣೆ ನಡೆಯುತ್ತಿತ್ತು. ಭಾನುವಾರ ಬೆಳಗಿನಜಾವ ಒಟ್ಟು ಏಳು ಉಗ್ರಗಾಮಿಗಳನ್ನು, ಸಾಯಂಕಾಲ ಇನ್ನಿಬ್ಬರು ಉಗ್ರರನ್ನು ಕೊಲ್ಲಲಾಗಿದೆ.

ಮೂವರು ಹುತಾತ್ಮರು: ದ್ರಾಗ್ಗಡ್‌ ಕಾರ್ಯಾಚರಣೆಯಲ್ಲಿ ಸೇನೆಯ ಮೂವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸೇನಾ ಸಿಬ್ಬಂದಿ ಹುತಾತ್ಮರಾದ ಬಗ್ಗೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶೋಕ ವ್ಯಕ್ತಪಡಿಸಿದ್ದಾರೆ.

ಘರ್ಷಣೆ: ಶೋಪಿಯಾನ್‌ನಲ್ಲಿ ಉಗ್ರರನ್ನು ಕೊಲ್ಲಲಾಗಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಭದ್ರತಾ ಪಡೆಗಳು ಮತ್ತು ಪೊಲೀಸರ ವಿರುದ್ಧ ಮುಗಿಬಿದ್ದರು. ಅವರನ್ನು ಚದುರಿಸಲು ಪ್ರಯತ್ನ ನಡೆಸಲಾಯಿತಾದರೂ, ಅದು ಫ‌ಲಕಾಣಲಿಲ್ಲ. ನಂತರ ನಡೆದ ಘರ್ಷಣೆಯಲ್ಲಿ ನಾಲ್ವರು ನಾಗರಿಕರು ಸಾವಿಗೀಡಾಗಿದ್ದಾರೆ. ಜನರನ್ನು ನಿಯಂತ್ರಿಸಲು ಪೆಲೆಟ್‌ ಗನ್‌ ಪ್ರಯೋಗಿಸಿದ್ದರಿಂದ 50 ಮಂದಿ ಸಾರ್ವಜನಿಕರಿಗೆ ಗಾಯಗಳಾಗಿವೆ. ಇನ್ನು ಆರು ಮಂದಿಗೆ ಗುಂಡು ಹಾರಿಸಿದ್ದರಿಂದ ಗಾಯಗಳಾಗಿವೆ. ಹುರಿಯತ್‌ ನಾಯಕರಿಗೆ ಗೃಹ ಬಂಧನ ವಿಧಿಸಲಾಗಿದೆ.

Advertisement

ಅನಂತನಾಗ್‌ನಲ್ಲೊಬ್ಬ ಸೆರೆ: ಅನಂತನಾಗ್‌ ಜಿಲ್ಲೆಯ ಡಿಯಲ್ಗಾಂನಲ್ಲಿ ನಡೆಸಲಾಗಿರುವ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಕಳೆದ ತಿಂಗಳಷ್ಟೇ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ. ಜಿಲ್ಲೆಯಲ್ಲಿ ನಡೆದ ಕಾರ್ಯಾರಣೆಯಲ್ಲಿ ಒಬ್ಬ ಉಗ್ರ ಶರಣಾಗತನಾಗಿದ್ದು, ಆತನನ್ನು ಸೆರೆಹಿಡಿಯಲಾಗಿದೆ.

ಮನವೊಲಿಕೆ:  ಕಾರ್ಯಾಚರಣೆಗೆ ಸಂಬಂಧಿಸಿ ಡಿಜಿಪಿ ಎಸ್‌.ಪಿ.ವೇದ್‌ ಮಾತನಾಡಿ, ಉಗ್ರ ಸಂಘಟನೆಗಳಿಗೆ ಸೇರದಂತೆ ಸ್ಥಳೀಯ ಯುವಕರ ಮನವೊಲಿಕೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ. ಡಿಯಲ್ಗಾಂ ಕಾರ್ಯಾಚರಣೆಗೂ ಮುನ್ನ ಉಗ್ರನೊಬ್ಬನ ಕುಟುಂಬ ಸದಸ್ಯರ ಜತೆ ಮಾತಾಡಿ ಶರಣಾಗುವಂತೆ ಹಿರಿಯ ಪೊಲೀಸ್‌ ಅಧಿಕಾರಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟಾದರೂ ಕೇಳದ ಆತನನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದಿದ್ದಾರೆ. ಕುಟುಂಬ ಸದಸ್ಯರ ಜತೆಗೆ ಮಾತನಾಡುತ್ತಿರುವಾಗಲೇ ಆತ ಪೊಲೀಸರತ್ತ ಗುಂಡು ಹಾರಿಸಿದ ಎಂದು ಅವರು ಹೇಳಿದ್ದಾರೆ.

ಮೂರನೇ ಎನ್‌ಕೌಂಟರ್‌: ಈ ನಡುವೆ ಶೋಪಿಯಾನ್‌ ಜಿಲ್ಲೆಯ ಕಚೂರಾದಲ್ಲಿ ಮೂರನೇ ಎನ್‌ಕೌಂಟರ್‌ ನಡೆದಿದ್ದು, ಅದರಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ. ಸೋಮವಾರ ಮತ್ತೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರಿಸಲಿವೆ.

ಇಂಟರ್‌ನೆಟ್‌ ಸೇವೆ ಸ್ಥಗಿತ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಕೊಂದು ಹಾಕುವ ಕಾರ್ಯಾಚರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಸೇನಾ ಪಡೆಗಳ ವಿರುದ್ಧ ಘರ್ಷಣೆಗಳು ಆರಂಭವಾಗುತ್ತಲೇ ಈ ಕ್ರಮ ಕೈಗೊಳ್ಳಲಾಯಿತು. ಇದಲ್ಲದೇ, ರೈಲು ಸೇವೆಗಳನ್ನೂ ನಿಲ್ಲಿಸಲಾಯಿತು.

ಫ‌ಯಾಜ್‌ ಹಂತಕರು ಫಿನಿಶ್‌
ಸೇನೆಯ 15 ಕಾಪ್ಸ್‌ನ ಲೆ.ಜ.ಎ.ಕೆ.ಭಟ್‌ ಮಾತನಾಡಿ, ಕೊಲ್ಲಲಾಗಿರುವ ಎಂಟು ಉಗ್ರರ ಪೈಕಿ ಇಬ್ಬರು ಕಳೆದ ಮೇನಲ್ಲಿ ಸೇನಾಧಿಕಾರಿ ಲೆ.ಉಮ್ಮರ್‌ ಫ‌ಯಾಜ್‌ರ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದಿದ್ದಾರೆ. ಲೆ.ಉಮ್ಮರ್‌ ಫ‌ಯಾಜ್‌ ಹತ್ಯೆಗೆ ಕಾರಣರಾಗಿರುವ ಉಗ್ರರನ್ನು ಇಶ್ಫಾಕ್‌ ಮಲಿಕ್‌ ಮತ್ತು ರಯೀಸ್‌ ತೋಕರ್‌ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಲೆ.ಫ‌ಯಾಜ್‌ರನ್ನು ಶೋಪಿಯಾನ್‌ ಜಿಲ್ಲೆಯ ಹರ್ಮಿನ್‌ ಪ್ರದೇಶದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

03- ಹುತಾತ್ಮರಾದ ಯೋಧರು- ಶೋಪಿಯಾನ್‌ನಲ್ಲಿ
02- ಅಸುನೀಗಿದ ನಾಗರಿಕರು- ಶೋಪಿಯಾನ್‌ನಲ್ಲಿ
50 ಮಂದಿ- ಪೆಲೆಟ್‌ಗನ್‌ ಪ್ರಯೋಗದಲ್ಲಿ ಗಾಯಗೊಂಡವರು
06 ಮಂದಿ- ಗುಂಡೇಟಿನಿಂದ ಗಾಯಗೊಂಡವರು

ಎಲ್ಲೆಲ್ಲಿ ಸೇನಾ ಕಾರ್ಯಾಚರಣೆ?
ಸ್ಥಳ                ಉಗ್ರರು             
ಅನಂತನಾಗ್‌               01
ಶೋಪಿಯಾನ್‌               09
ಕಚೂªರಾ                   03

ಯಾವ ಸಂಘಟನೆಗೆ ಸೇರಿದವರು? ಲಷ್ಕರ್‌-ಎ-ತೊಯ್ಬಾ, ಹಿಜ್ಬುಲ್‌ ಮುಜಾಹಿದೀನ್‌
ಕದನ ವಿರಾಮ ಉಲ್ಲಂಘನೆ: ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಪೂಂಛ…ಗೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ತಾನದ ಸೇನಾಪಡೆಗಳು ಭಾರತದ ಸೈನಿಕರತ್ತ ಗುಂಡು ಹಾರಿಸಿವೆ. ಅದಕ್ಕೆ ಪ್ರತ್ಯುತ್ತರವಾಗಿ ಭಾರತದ ಸೈನಿಕರೂ ಗುಂಡು ಹಾರಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಸೇನೆ, ಪೊಲೀಸ್‌ ಇಲಾಖೆ ಮತ್ತು ಇತರ ಭದ್ರತಾ ಪಡೆಗಳು ಉಗ್ರರ ವಿರುದ್ಧ ಹೋರಾಟ ಮುಂದುವರಿಸಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಒಂದೇ ಧೋರಣೆ ಹೊಂದಿವೆ.
– ನಿರ್ಮಲ್‌ ಸಿಂಗ್‌, ಜಮ್ಮು ಮತ್ತು ಕಾಶ್ಮೀರ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next