Advertisement

ಪ್ರವಾಸಕ್ಕೆ  ತೆರಳಿದ 13 ಜನ ಜಿಪಂ ಸದಸ್ಯರು!

10:14 AM Mar 13, 2019 | Team Udayavani |

ಬಾಗಲಕೋಟೆ: ಲೋಕಸಭೆ ಚುನಾವಣೆ ಘೊಷಣೆಯಾಗಿದ್ದು, ಚುನಾವಣೆ ನೀತಿ ಸಂಹಿತೆ ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಡ್ಡಿಯಾಗಲ್ಲ ಎಂದು ಕರ್ನಾಟಕ ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ. ಹೀಗಾಗಿ ಎರಡು ದಿನ ಮಂಕಾಗಿದ್ದ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್‌ನ ಕೆಲ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ.

Advertisement

ಜಿಪಂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ನೇತೃತ್ವದಲ್ಲಿ 13 ಜನ ಸದಸ್ಯರು ದಾಂಡೇಲಿ, ಗೋವಾ ಮುಂತಾದೆಡೆ ಪ್ರವಾಸಕ್ಕೆ ತೆರಳಿದ್ದಾರೆ. ಇವರೆಲ್ಲ ಮಾ.13ರಂದು ರಾತ್ರಿ ಬಾಗಲಕೋಟೆಗೆ ಮರಳಲಿದ್ದಾರೆ ಎನ್ನಲಾಗಿದೆ.

ಒಡಕಿನ ಲಾಭವೂ ಪಡೆಯುತ್ತಿಲ್ಲ: ಜಿಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಅಧಿಕಾರಕ್ಕೆ ಬರಲು ಸ್ಪಷ್ಟ ಬಹುಮತ ಇಲ್ಲದಿದ್ದರೂ, ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸುವ ನಿಟ್ಟಿನಲ್ಲಿ ಬಿಜೆಪಿ ಗಟ್ಟಿ ನಿರ್ಧಾರ ಮಾಡಿಲ್ಲ ಎನ್ನಲಾಗುತ್ತಿದೆ.

ಒಟ್ಟು 36 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್‌ 17, ಬಿಜೆಪಿ-18 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದರೂ, ಬಿಜೆಪಿಗಿಂತ ಕಡಿಮೆ ಸ್ಥಾನಗಳಿದ್ದರೂ ಕಾಂಗ್ರೆಸ್‌ ಈ ವರೆಗೆ (33 ಗಳು) ಅಧಿಕಾರ ಅನುಭವಿಸಿದೆ. ಜಿಪಂನಲ್ಲಿ  ತಿದೊಡ್ಡ ಪಕ್ಷವಾಗಿರುವ ಬಿಜೆಪಿ, ಚಾಣಾಕ್ಷ್ಯ  ರಾಜಕೀಯ ನಡೆ ಪ್ರದರ್ಶಿಸಿದ್ದರೆ, ಅಧಿಕಾರ ದೊರೆಯುತ್ತಿತ್ತು. ಕನಿಷ್ಠ ಪಕ್ಷ ಕಾಂಗ್ರೆಸ್‌ನಲ್ಲಿನ ಒಡಕಿನ ಲಾಭ ಪಡೆದರೂ ನಮಗೆ ಅಧಿಕಾರ ದೊರೆಯುತ್ತದೆ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬಂದಿವೆ.

ಬಾಯಕ್ಕ-ಶಶಿಕಲಾ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಐಹೊಳೆ ಕ್ಷೇತ್ರದ ಸದಸ್ಯೆ ಬಾಯಕ್ಕ ಮೇಟಿ ಹಾಗೂ ಅನವಾಲ ಕ್ಷೇತ್ರದ ಶಶಿಕಲಾ ರಾಮಚಂದ್ರ ಯಡಹಳ್ಳಿ ಅವರ ಮಧ್ಯೆ ಪೈಪೋಟಿ ನಡೆದಿದೆ. ಸದ್ಯದ ರಾಜಕೀಯ ಬೆಳವಣಿಗೆಯಿಂದ ಬಾಯಕ್ಕ ಮೇಟಿ ಅವರೇ ಅಧ್ಯಕ್ಷರಾಗುತ್ತಾರೆ ಎಂದು ಕಾಂಗ್ರೆಸ್‌ನ ಒಂದು ಬಣ ವಿಶ್ವಾಸದಿಂದ ಹೇಳಿಕೊಳ್ಳುತ್ತಿದೆ. ಆದರೆ, ಕೊನೆ ಗಳಿಗೆಯಲ್ಲಿ ಸಾಮಾಜಿಕ ನ್ಯಾಯದನ್ವಯ ನಮಗೆ ಅವಕಾಶ ದೊರೆಯತ್ತದೆ ಎಂಬ ವಿಶ್ವಾಸದಲ್ಲಿ ಯಡಹಳ್ಳಿಯವರಿದ್ದಾರೆ ಎನ್ನಲಾಗಿದೆ.

Advertisement

ಬಿಜೆಪಿಗೆ ಸಂಪರ್ಕಕ್ಕೆ ಸಿಗ್ತಿಲ್ಲ ಮೂವರು: ಒಟ್ಟು 18 ಸದಸ್ಯ ಬಲ ಹೊಂದಿರುವ ಬಿಜೆಪಿಯ ಸದಸ್ಯರಲ್ಲಿ ಮೂವರು ಪಕ್ಷದ ಹಿರಿಯರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಕಳೆದ ವಾರ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ತಮ್ಮ ಪಕ್ಷದ ಜಿಪಂ ಸದಸ್ಯರ ಸಭೆ ಕರೆದಾಗಲೂ ಆ ಮೂವರು ಸದಸ್ಯರು ಗೈರು ಉಳಿದಿದ್ದರು. ಹೀಗಾಗಿ ಅಂದೇ ಅಧ್ಯಕ್ಷ ಸ್ಥಾನ ಬಿಜೆಪಿಗೆ ಪಡೆಯಬೇಕೆಂಬ ಈಶ್ವರಪ್ಪ ಅವರ ಗುರಿ-ಕನಸು ಕಮರಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಯಾರು ಆ ಮೂವರು?: ಬಿಜೆಪಿಯಿಂದ ಆಯ್ಕೆಯಾಗಿ, ತಮ್ಮದೇ ಪಕ್ಷದಿಂದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗೆ ಬೆಂಬಲ ಕೊಡಲು ಮುಂದಾಗುತ್ತಿಲ್ಲ ಎಂಬ ಆರೋಪಹೊತ್ತ ಆ ಮೂವರು ಸದಸ್ಯರು ಯಾರು ಎಂಬ ಚರ್ಚೆ ನಡೆಯುತ್ತಿದೆ.

ಬಿಜೆಪಿಯ ಮೂಲಗಳೇ ಹೇಳುವ ಪ್ರಕಾರ, ಬಾದಾಮಿ, ಜಮಖಂಡಿ ಹಾಗೂ ಹುನಗುಂದ ತಾಲೂಕಿನ ತಲಾ ಒಬ್ಬರು ಸದಸ್ಯರು, ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಆದರೆ, ಅವರೆಲ್ಲ ಕಾಂಗ್ರೆಸ್‌ ನವರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಲ್ಲ. ಅನಿವಾರ್ಯ ಕಾರಣಗಳಿಂದ ಮೊನ್ನೆಯ ಸಭೆಗೆ ಅವರು ಬಂದಿರಲಿಲ್ಲ. ಕಾಂಗ್ರೆಸ್‌ನಲ್ಲೂ ಭಿನ್ನಾಭಿಪ್ರಾಯ ಬಹಳಷ್ಟಿದ್ದು, ನಮ್ಮ ಮೂವರು ಸದಸ್ಯರು ನಮ್ಮ ಪರವಾಗಿಯೇ ಇರುತ್ತಾರೆ ಎಂಬ ವಿಶ್ವಾಸವನ್ನು ಬಿಜೆಪಿಯ ಹಿರಿಯ ಸದಸ್ಯರೊಬ್ಬರು ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ.14ರಂದು ನಿಗದಿಯಾಗಿದ್ದ ಚುನಾವಣೆ ನಡೆಸಬೇಕೋ, ಬೇಡವೋ ಎಂಬುದರ ಕುರಿತು ಚುನಾವಣೆ ಆಯೋಗಕ್ಕೆ ಸ್ಪಷ್ಟನೆ ಕೋರಲಾಗಿತ್ತು. ನೀತಿ ಸಂಹಿತೆಗೂ ಮುಂಚೆಯೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಗೊಳಿಸಿ, ಅಧಿಸೂಚನೆ ಹೊರಡಿಸಿದ್ದರಿಂದ ಚುನಾವಣೆ ನಡೆಸಲು ಯಾವುದೇ ತೊಂದರೆ ಇಲ್ಲ ಎಂಬ ಸ್ಪಷ್ಟನೆ ಬಂದಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
 ಪಿ.ಎ. ಮೇಘಣ್ಣವರ,
ಪ್ರಾದೇಶಿಕ ಆಯುಕ್ತರು, ಬೆಳಗಾವಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next