ಮಣಿಪಾಲ: ಲೋಕಾಯುಕ್ತ ಕೋರ್ಟ್‌ನಲ್ಲಿ ಉಡುಪಿ ಜಿಲ್ಲೆಯ 129 ದೂರುಗಳು ವಿಚಾರಣೆ ಹಂತದಲ್ಲಿವೆ. ಇವುಗಳಲ್ಲಿ 41 ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಂಬಂಧಪಟ್ಟವರಿಗೆ 15 ದಿನದ ಹಿಂದೆ ನೋಟಿಸ್ ನೀಡಲಾಗಿದೆ. ಸೋಮವಾರ ದೂರುಗಳ ವಿಚಾರಣೆ ನಡೆಸಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಪ್ರಜೆಗಳು ಗೌರವಯುತ ಜೀವನ ನಡೆಸುವ ನಿಟ್ಟಿನಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕಾರ್ಯನಿರ್ವಹಿಸಬೇಕು. ಜನರ ಹಕ್ಕು ಮತ್ತು ಬಾಧ್ಯತೆಗಳನ್ನು ಮನವರಿಕೆ ಮಾಡಿಕೊಡಬೇಕು.ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಪಾರದರ್ಶಕ, ಪ್ರಾಮಾಣಿಕ ಹಾಗೂ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿ, ಸಂಸ್ಥೆಯ ಕೆಲಸ, ಸಂಸ್ಥೆಯಲ್ಲಿ ಯಾವ ರೀತಿಯ ದೂರುಗಳ ವಿಚಾರಣೆ ನಡೆಯುತ್ತದೆ ಹಾಗೂ ಯಾವ ರೀತಿಯ ಪ್ರತಿಬಂಧಕಗಳಿವೆ ಎಂಬ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ದೇಶಾದ್ಯಂತ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಲೋಕಾಯುಕ್ತ. ಅಧಿಕಾರಿಗಳು ದೂರು ಬಂದಾಗ ಧನಾತ್ಮಕವಾಗಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು. ತತ್‌ಕ್ಷಣ ಸ್ಪಂದಿಸುವ ಮೂಲಕ ಸಾರ್ವಜನಿಕರಿಗೆ ನೈತಿಕ ಬೆಂಬಲ ನೀಡಬೇಕು ಎಂದರು.
ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ., ರಾಜ್ಯ ಲೋಕಾಯುಕ್ತ ವಿಚಾರಣೆಗಳ ಉಪನಿಬಂಧಕ ಎಂ.ವಿ. ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ಪ್ರಭಾರ ಸಹಾಯಕ ನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಡಿಎಫ್‌ಒಗಳಾದ ಗಣಪತಿ ಮತ್ತು ಶಿವರಾಮ ಬಾದಾಮಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್, ಉಪವಿಭಾಗಾಧಿಕಾರಿ ರಶ್ಮಿ ಉಪಸ್ಥಿತರಿದ್ದರು.
ಎಡಿಸಿ ಮಮತಾ ದೇವಿ ಸ್ವಾಗತಿಸಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕ್ರಿಮಿನಲ್ ಕೇಸ್ ಹಾಕುವ ಅವಕಾಶವೂ ಇದೆ
ದುರುದ್ದೇಶಪೂರಿತ ದೂರು ಸಲ್ಲಿಸಿದ ವ್ಯಕ್ತಿಯ ವಿರುದ್ಧ ನ್ಯಾಯಾಲಯ ನಿಂದನೆಗೆ ಸಮನಾದ ಶಿಕ್ಷೆ ವಿಧಿಸುವ ಅಧಿಕಾರ ಲೋಕಾಯುಕ್ತಕ್ಕಿದೆ. ಜತೆಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಬಹುದು. ಅದೇ ರೀತಿ ಸರಕಾರಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸಬಹುದು. ಕ್ರಿಮಿನಲ್ ಕೇಸ್ ಹಾಕುವ ಅವಕಾಶವೂ ಇದೆ ಎಂದು ಉಪಲೋಕಾಯುಕ್ತರು ತಿಳಿಸಿದರು.
ಇಂದು ಸಂವಾದ
ನ್ಯಾ| ಕೆ.ಎನ್. ಫಣೀಂದ್ರ ರವಿವಾರ ಬೆಳಗ್ಗೆ 10ರಿಂದ 11ರ ವರೆಗೆ ನಗರದ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 11.15ರಿಂದ ಮಧ್ಯಾಹ್ನ 12.30ರ ವರೆಗೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಸಂಜೆ 4 ಗಂಟೆಗೆ ಸಾರ್ವಜನಿಕ ಸಂಸ್ಥೆಗಳು ಹಾಗೂ ಸರಕಾರಿ ಸಂಸ್ಥೆಗಳಿಗೆ ಭೇಟಿ ನೀಡುವರು.
153 ಅರ್ಜಿ ಸಲ್ಲಿಕೆ
ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಲೋಕಾಯುಕ್ತಕ್ಕೆ ಶನಿವಾರ 153 ಅರ್ಜಿಗಳು ಸಲ್ಲಿಕೆಯಾಗಿದ್ದು, 77 ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲಾಯಿತು. ಉಳಿದ ಪ್ರಕರಣಗಳ ವಿಚಾರಣೆ ಫೆ. 5ರಂದು ನಡೆಯಲಿದೆ.