Advertisement
ಜಿಲ್ಲೆಗೆ ಪಶ್ಚಿಮವಾಹಿನಿ ಯೋಜನೆಯಡಿ ವಿಧಾನಸಭಾ ಕ್ಷೇತ್ರವಾರು 2021-22ನೇ ಸಾಲಿನಲ್ಲಿ ಕಾಪುಗೆ 15, ಉಡುಪಿಗೆ 35, ಕುಂದಾಪುರಕ್ಕೆ 34, ಬೈಂದೂರಿಗೆ 28 ಹಾಗೂ ಕಾರ್ಕಳಕ್ಕೆ 13 ಸೇರಿ 125 ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗಳು ನಡೆಯಲಿದೆ.
ಪಶ್ಚಿಮ ವಾಹಿನಿ ಯೋಜನೆಯಡಿ ನದಿಗಳ ನೀರು ಸಮುದ್ರಕ್ಕೆ ಸೇರುವುದನ್ನು ಹಂತಹಂತವಾಗಿ ತಪ್ಪಿಸಿ, ಕುಡಿಯುಲು ಅಥವಾ ಕೃಷಿ ಚಟುವಟಿಕೆಗಳಿಗೆ ಬಳಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಸಂಬಂಧ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಮುಂದಿನ ಐದು ವರ್ಷಕ್ಕೆ ಬೇಕಾಗುವ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಐದು ವರ್ಷದಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಮಾಸ್ಟರ್ ಪ್ಲಾನ್ ತಯಾರಾಗಿದೆ. ಉಡುಪಿ ಸಹಿತವಾಗಿ ಪಶ್ಚಿಮ ವಾಹಿನಿ ಯೋಜನೆ ಅನ್ವಯವಾಗುವ ಜಿಲ್ಲೆಗಳಿಗೆ ಇಲಾಖೆಯಿಂದ 2021-22ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜತೆಗೆ ಕ್ರಿಯಾಯೋಜನೆಗೂ ಸರಕಾರದ ಹಂತದಲ್ಲಿ ಅನುಮೋದನೆಯನ್ನು ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯ ನಂತರ ಮುಂದಿನ ಕಾಮಗಾರಿಗಳು ಶುರುವಾಗಲಿದೆ.
Related Articles
ಜಿಲ್ಲೆಯಲ್ಲಿ ಪ್ರಮುಖ ನದಿಗಳ ಜತೆಗೆ ಸಣ್ಣ ಸಣ್ಣ ಉಪನದಿಗಳು ಇವೆ. ಬಹುತೇಕ ಕಡೆಗಳಲ್ಲಿ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ನದಿ ಅಥವಾ ಉಪನದಿಗೆ(ಹಳ್ಳಗಳು ಸೇರಿ) ಕಿಂಡಿ ಅಣೆಕಟ್ಟು ನಿರ್ಮಿಸಿ, ಉಪ್ಪು ನೀರು ಬರುವುದನ್ನು ತಡೆಯಲು ಮಾಸ್ಟರ್ ಪ್ಲಾನ್‌ನಲ್ಲಿ ಪ್ರಸ್ತಾವಿಸಲಾಗಿದೆ. ಇದರಿಂದ ನದಿ ಪಾತ್ರದ ಹಳ್ಳಿಗಳಿಗೆ ಕೃಷಿ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬಹುದಾಗಿದೆ. ಉಪ್ಪು ನೀರು ಬರುವ ಕಡೆಗಳನ್ನೇ ಆದ್ಯತೆ ಮೇರೆಗೆ ಹಂತ ಹಂತವಾಗಿ ಕೈಗೊಳ್ಳಲು ಪರಿಶೀಲಿಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Advertisement
ನಿರ್ವಹಣೆ ಸಮಸ್ಯೆಯಿದೆಜಿಲ್ಲೆಯಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಕೆಲವು ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಉಪ್ಪು ನೀರು ಪ್ರವೇಶ ಮಾಡದಂತೆ ಕಿಂಡಿ ಅಣೆಕಟ್ಟಿಗೆ ಹಾಕುವ ಹಲಗೆಗಳನ್ನು ಮಳೆಗಾಲ ಅರಂಭವಾಗುತ್ತಿದ್ದಂತೆ ತೆಗೆಯಬೇಕು ಮತ್ತು ಮಳೆಗಾಲ ಮುಗಿಯುತ್ತಿದ್ದಂತೆ ಪುನಃ ಹಲಗೆ ಹಾಕಬೇಕು. ಕಿಂಡಿಅಣೆಕಟ್ಟಿನ ಹಲಗೆಗಳ ಗುಣಮಟ್ಟವನ್ನು ಆಗಿಂದಾಗೇ ಪರಿಶೀಲನೆ ಮಾಡುತ್ತಿರಬೇಕು. ಹಲಗೆಗಳ ಮಧ್ಯದಲ್ಲಿ ಮಣ್ಣನ್ನು ಸರಿಯಾಗಿ ತುಂಬ ಬೇಕು. ಇಲ್ಲವಾದರೆ ಉಪ್ಪು ನೀರು ಹೋಗುವ ಸಾಧ್ಯತೆ ಇರುತ್ತದೆ. ಜತೆಗೆ ಕಾಲಕಾಲಕ್ಕೆ ಹೂಳೆತ್ತುವ ಕಾರ್ಯವೂ ಆಗುತ್ತಿರಬೇಕು. ಆದರೆ, ಜಿಲ್ಲೆಯ ಬಹುತೇಕ ಕಿಂಡಿ ಅಣೆಕಟ್ಟುಗಳಲ್ಲಿ ನಿರ್ವಹಣೆಯೇ ಸರಿಯಿಲ್ಲ. ಹಲಗೆಯನ್ನು ನಿರ್ದಿಷ್ಟ ಸಮಯದಲ್ಲಿ ಅಳವಡಿಸುವುದು ಮತ್ತು ತೆಗೆಯುವುದು ಆಗುತ್ತಿಲ್ಲ ಎಂಬ ಅರೋಪವೂ ಇದೆ. ಅಂದಾಜು ಪಟ್ಟಿ ಸಿದ್ಧ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 125 ಕಿಂಡಿ ಅಣೆಕಟ್ಟಿಗೆ ಅಂದಾಜುಪಟ್ಟಿ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಅರಂಭವಾಗಿದೆ. ಸರಕಾರದ ಅನುಮತಿಯೊಂದಿಗೆ ಎಲ್ಲೆಲ್ಲಿ ಅವಶ್ಯಕತೆಯಿದೆಯೋ ಅಲ್ಲೆಲ್ಲ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ.
-ಶೇಷಕೃಷ್ಣ ರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರ,
ಸಣ್ಣ ನೀರಾವರಿ ಇಲಾಖೆ, ಉಡುಪಿ – ರಾಜು ಖಾರ್ವಿ ಕೊಡೇರಿ