ಮಹಾನಗರ: ಮಂಗಳೂರು ಧರ್ಮಪ್ರಾಂತ್ಯದ ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ)ನೇತೃತ್ವದಲ್ಲಿ ಕೇರಳ ಹಾಗೂ ಕೊಡಗಿನ ಪ್ರವಾಹ ಪೀಡಿತರಿಗೆ ನೆರವಾಗಲು ಸ್ಥಾಪಿಸಿದ ‘ಮಿಷನ್ ಕೆ 2 ಕೆ’ ಎಂಬ ಮಾನವೀಯ ಯೋಜನೆಯಡಿಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ 124 ಚರ್ಚ್‌ಗಳ ಯುವಕರು ಸಂಗ್ರಹಿಸಿದ ಸರಕುಗಳು, ಬಟ್ಟೆ, ಅಕ್ಕಿ, ಧಾನ್ಯಗಳು, ಕುಡಿಯುವ ನೀರಿನ ಬಾಟಲಿಗಳು, ಬಿಸ್ಕೆಟುಗಳು ಸೇರಿದಂತೆ ಹಲವು ವಸ್ತುಗಳನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಅಲೋಶಿಯಸ್ ಪೌಲ್ ಡಿ’ಸೋಜಾ ಅವರು ಜಪ್ಪು ವೆಲೆನ್ಸಿಯಾ ಬಳಿ ಇರುವ ಐಸಿವೈಎಂನ ಕಚೇರಿಯ ಆವರಣದಲ್ಲಿ ಟ್ರಕ್ಕುಗಳಿಗೆ ನಿಶಾನೆ ತೋರಿಸಿ ಚಾಲನೆ ನೀಡಿದರು.
ಕಷ್ಟಪಡುವ ಹಾಗೂ ನಿರಾಶ್ರಿತರಿಗೆ ಸಹಾಯ ಮಾಡುವ ಬೋಧನೆಯನ್ನು ಏಸುಕ್ರಿಸ್ತರು ತಿಳಿಸಿದಂತೆ, ನಮ್ಮ ಯುವಕರು ಪಾಲಿಸಿದ್ದಾರೆ ಎಂದು ಶ್ಲಾಘಿಸಿದರು. 1.25 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ದಾನಿಗಳಿಂದ ಸಂಗ್ರಹಿಸಿ ಕೇರಳದ ವಯನಾಡ್, ಪಾಲಕ್ಕಾಡ್, ಕ್ಯಾಲಿಕಟ್, ಕುಂಟಾ ನಾಡ್, ಚೆಂಗನೂರ್, ಚಾಲಕುಡಿ ಮತ್ತು ಕೊಡಗಿನ ಶುಂಟಿಕೊಪ್ಪ, ಹಟ್ಟಿಹೊಳೆ, ಬೆಟ್ಟಗಿರಿ, ಮಾಧಪುರ, ಸೋಮವಾರ ಪೇಟೆ ಮುಂತಾದ ಸ್ಥಳಗಳಿಗೆ 14 ಟ್ರಕ್ಕುಗಳಲ್ಲಿ ಕಳುಹಿಸಿಕೊಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂನ ನಿರ್ದೇಶಕ ವಂ| ರೊನಾಲ್ಡ್ ಪ್ರಕಾಶ್ ಡಿ’ಸೋಜಾ ಮಾತನಾಡಿ, ಐಸಿವೈಎಂನ ಧ್ಯೇಯ ವಾಕ್ಯವು ಲೀಡರ್ ಶಿಪ್ ತ್ರೂ ಸರ್ವಿಸ್ ಎಂದು ಹೇಳುತ್ತದೆ. ಅದರಂತೆ ಈ ಸತ್ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು. ಐಸಿವೈಎಂ ಮಂಗಳೂರು ಧರ್ಮ ಪ್ರಾಂತ್ಯದ ಅಧ್ಯಕ್ಷರಾದ ಜೆಸನ್ ಪಿರೇರಾ ಮಾತನಾಡಿ, ಸುಮಾರು 45ರಿಂದ 50 ಯುವಕರು ಈ ಮಿಷನ್‌ಗೆ ಯಶಸ್ಸನ್ನು ಪಡೆಯಲು ಶ್ರಮಿಸುತ್ತಿದ್ದಾರೆ ಎಂದರು. ಐಸಿವೈಎಂ ಮಂಗಳೂರು ಧರ್ಮ ಪ್ರಾಂತ್ಯದ ನಿರ್ದೇಶಕರಾದ ವಂ| ರೊನಾಲ್ಡ್ ಪ್ರಕಾಶ್ ಡಿಸೋಜಾ ಮಾರ್ಗ ದರ್ಶನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಐಸಿವೈಎಂನ ಉಪನಿರ್ದೇ ಶಕರಾದ ವಂ| ಅಶ್ವಿನ್ ಕಾರ್ಡೋಝಾ, ಜಯ್ಸನ್ ಪೆರೇರಾ ಮತ್ತು ಫೋರ್‌ವಿಂಡ್ಸ್ ಮಾಸ್ ಕಮ್ಯುನಿಕೇಶನ್ ನಿರ್ದೇಶಕ ಇ. ಫೆರ್ನಾಡಿಸ್ ಉಪಸ್ಥಿತರಿದ್ದರು.