Advertisement

1.20 ಕೋ.ರೂ. ಕಾಳಧನ, 1.50 ಕಿಲೋ ಚಿನ್ನ ಸಹಿತ ಇಬ್ಬರ ಬಂಧನ

10:42 AM Oct 02, 2018 | Team Udayavani |

ಕಾಸರಗೋಡು: ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 1.20 ಕೋ.ರೂ. ಕಾಳಧನ ಮತ್ತು ಒಂದೂವರೆ ಕಿಲೋ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ. ಕಾರು ಚಾಲಕ ತಳಂಗರೆ ಕುನ್ನಿಲ್‌ ನಿವಾಸಿ ಬಶೀರ್‌(60) ಮತ್ತು ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ರಾಮಚಂದ್ರ ಪಾಟೀಲ್‌(27) ಬಂಧಿತರು. ಇನ್ನೋರ್ವನನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Advertisement

ಕಳ್ಳಸಾಗಾಟದ ಬಗ್ಗೆ ಕಸ್ಟಂಸ್‌ ವಿಭಾಗದ ಕಣ್ಣೂರು ಡಿವಿಷನಲ್‌ ಅಸಿಸ್ಟೆಂಟ್‌ ಕಮಿಷನರ್‌ ಪ್ರದೀಪ್‌ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಅವರ ನಿರ್ದೇಶ ಪ್ರಕಾರ  ಕಾಸರಗೋಡು ಡಿವಿಷನ್‌ ಸೂಪರಿಂಟೆಂಡೆಂಟ್‌ ಪಿ.ಪಿ.ರಾಜೀವ್‌ ಮತ್ತು ಕಣ್ಣೂರು ಡಿವಿಷನ್‌ ಸೂಪರಿಂಟೆಂಡೆಂಟ್‌ ಸುಕುಮಾರನ್‌  ನೇತೃತ್ವದಲ್ಲಿ ಕಸ್ಟಂಸ್‌ ತಂಡ ಮಂಜೇಶ್ವರದಲ್ಲಿ ವಾಹನ ತಪಾಸಣೆ ನಡೆಸಿತ್ತು. 

ತಪಾಸಣೆ ಸಂದರ್ಭ ಮಂಗಳೂರಿನಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಅದು ಪರಾರಿಯಾಗಲು ಮುಂದಾಯಿತು. ಕಸ್ಟಂಸ್‌ ತಂಡ ಅದನ್ನು ಬೆನ್ನಟ್ಟಿ ಉಪ್ಪಳದಿಂದ ವಶಕ್ಕೆ  ಪಡೆಯಿತು. ಚಾಲಕ ತಳಂಗರೆಯ ಬಶೀರ್‌ನ ವಿಚಾರಣೆಯಿಂದ ಸಿಕ್ಕಿದ  ಮಾಹಿತಿಯಂತೆ ಕಾಸರಗೋಡು ಕೋಟೆ ರಸ್ತೆಯ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿ ಅಲ್ಲಿ ಬಚ್ಚಿಡಲಾಗಿದ್ದ ಒಂದೂವರೆ ಕಿಲೋ ಚಿನ್ನದ ಬಿಲ್ಲೆಯನ್ನು ವಶಪಡಿಸಲಾಯಿತು. ಇಲ್ಲಿ ಸಾಂಗ್ಲಿ ನಿವಾಸಿ ರಾಮಚಂದ್ರ ಪಾಟೀಲ್‌ ಮತ್ತು ಕಾರ್ಮಿಕ ರವಿ ಇದ್ದರು. ಅವರಿಬ್ಬರನ್ನು ಕಸ್ಟಂಸ್‌ ತಂಡ ವಶಕ್ಕೆ   ಪಡೆದಿದ್ದು, ಈ ಪೈಕಿ ರಾಮಚಂದ್ರ ಪಾಟೀಲ್‌ನನ್ನು ಬಂಧಿಸಲಾಗಿದೆ.

ಸೀಟಿನಲ್ಲಿ ಬಚ್ಚಿಡಲಾಗಿತ್ತು 


ಕಾರನ್ನು ತೀವ್ರ ತಪಾಸಣೆ ಮಾಡಿದಾಗ ಅದರ ಹಿಂದಿನ ಸೀಟಿನ ಒರಗುವ ಭಾಗದೊಳಗೆ ಗುಪ್ತವಾಗಿ ನಿರ್ಮಿಸಲಾದ ಕವಾಟಿನೊಳಗೆ ಬಚ್ಚಿಡಲಾದ 1.20 ಕೋ.ರೂ. ಕಾಳಧನ ಪತ್ತೆಯಾಯಿತು. ವಶಪಡಿಸಿಕೊಂಡ ಚಿನ್ನದ ಮೌಲ್ಯ 50 ಲ.ರೂ. ಎಂದು ಅಂದಾಜಿಸಲಾಗಿದೆ. 

Advertisement

ನಮಗೆ ಗೊತ್ತಿಲ್ಲ 
ಆದರೆ  ಕಾರಿನೊಳಗೆ ಬಚ್ಚಿಡಲಾಗಿದ್ದ ಕಾಳಧನದ ಬಗ್ಗೆ ತನಗೇನೂ ತಿಳಿದಿಲ್ಲವೆಂದೂ, 15,000 ರೂ. ಬಾಡಿಗೆ ನೀಡಿ ಆ ಕಾರನ್ನು ಮಂಗಳೂರಿನಿಂದ ಕಾಸರಗೋಡಿಗೆ ಸಾಗಿಸಲಷ್ಟೇ ತಮಗೆ ಓರ್ವರು ನಿರ್ದೇಶ ನೀಡಿದ್ದಾರೆಂದು ಬಶೀರ್‌ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ರಾಮಚಂದ್ರ ಪಾಟೀಲ್‌ ಚಿನ್ನ ಕಳ್ಳಸಾಗಾಟಗಾರರ ಕೆಲಸಗಾರ ಮಾತ್ರವೇ ಆಗಿರುವುದಾಗಿಯೂ ಸಂಶಯಿಸಲಾಗುತ್ತಿದೆ. ಚಿನ್ನ ಮತ್ತು ಹಣದ ಮಾಲಕ ಮುಂಬಯಿ ನಿವಾಸಿಯಾಗಿದ್ದಾನೆಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿದ್ದು, ಈತನಿಗಾಗಿ ಶೋಧ ನಡೆಸುತ್ತಿದೆ. ಮುಂಬಯಿ, ಮಂಗಳೂರು ಮತ್ತು ಕಾಸರಗೋಡನ್ನು ಕೇಂದ್ರೀಕರಿಸಿ ಕಾರ್ಯವೆಸಗುವ ಚಿನ್ನ ಕಳ್ಳ ಸಾಗಾಟದ ದೊಡ್ಡಜಾಲ ಇದರ ಹಿಂದಿದೆ ಎನ್ನಲಾಗಿದೆ.

ಸೊತ್ತು ಕೊಚ್ಚಿ ಗೋದಾಮಿಗೆ
ಚಿನ್ನ ಮತ್ತು ಹಣವನ್ನು ಕಸ್ಟಂಸ್‌ನ ಕೊಚ್ಚಿ ಘಟಕದ ಗೋದಾಮಿಗೆ ಸಾಗಿಸಲಾಗುವುದು. ಈ ಕುರಿತಾದ ವರದಿಯನ್ನು ಕೋರ್ಟಿಗೆ ಹಾಜರು ಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next