Advertisement

ಆಮ್ಲಜನಕ ಸಿಲಿಂಡರ್ ಹೊರುವ ಪರಿಸ್ಥಿತಿ ಬರುವುದು ಬೇಡ; ಪ್ರಧಾನಿಗೆ 12 ವರ್ಷದ ಬಾಲಕಿ ಪತ್ರ

07:55 PM Sep 07, 2020 | Karthik A |

ಮಣಿಪಾಲ: “ಹವಾಮಾನ ವೈಪರಿತ್ಯಕ್ಕೆ ನಾವು ಏನಾದರೂ ಮಾಡಲೇಬೇಕಾಗಿದೆ. ನಮ್ಮಿಂದ ಏನೂ ಮಾಡಲಾಗದಿದ್ದರೆ ಒಂದು ದಿನ ಎಲ್ಲರೂ ಆಮ್ಲಜನಕ ಸಿಲಿಂಡರ್‌ ಅನ್ನು ಹೊತ್ತುಕೊಂಡು ಓಡಾಡಬೇಕಾಗುತ್ತದೆ.’
ಇದು ಉತ್ತರಾಖಂಡದ ಹರಿದ್ವಾರ ಮೂಲದ ರಿಧಿಮಾ ಎಂಬ ಬಾಲಕಿ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಸಾಲುಗಳು.

ಬ್ಲೂ ಸ್ಕೈಗಾಗಿ ಮೊದಲ ಅಂತಾರಾಷ್ಟ್ರೀಯ ಶುದ್ಧ ವಾಯು ದಿನಾಚರಣೆಯ ಸಂದರ್ಭದಲ್ಲಿ 12 ವರ್ಷದ ಪರಿಸರ ಕಾರ್ಯಕರ್ತೆ ರಿಧಿಮಾ ಎಂಬಾಕೆ ಪ್ರಧಾನ ಮಂತ್ರಿಗೆ ಶುದ್ಧ ಗಾಳಿಯನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ. ಇದು ದೇಶದ ಗಮನ ಸೆಳೆದಿದೆ.

Advertisement

ಆಕ್ಸಿಜನ್‌ ಸಿಲಿಂಡರ್‌ಗಳು ಮಕ್ಕಳ ಜೀವನದ ಪ್ರಮುಖ ಭಾಗವಾಗದಂತೆ ನೋಡಿಕೊಳ್ಳಿ. ಅದನ್ನು ನಾವು ಭವಿಷ್ಯದಲ್ಲಿ ನಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗಾಳಿಯು ಎಷ್ಟು ಕಲುಷಿತವಾಗಿದೆ ಎಂದರೆ ಆಮ್ಲಜನಕ ಸಿಲಿಂಡರ್‌ನೊಂದಿಗೆ ಶಾಲೆಗೆ ಹೋಗುವುದನ್ನು ಊಹಿಸುವುದೂ ಕಷ್ಟ. ನನ್ನಂತಹ 12 ವರ್ಷದ ಮಗುವಿಗೆ ಉಸಿರಾಟದ ತೊಂದರೆ ಇದ್ದರೆ ಜೀವ ಉಳಿಸಿಕೊಳ್ಳಲು ತುಂಬಾ ಕಷ್ಟವಾದೀತು. ದಿಲ್ಲಿ ಅಥವಾ ಇತರ ನಗರಗಳಲ್ಲಿ ವಾಸಿಸುವ ಮಕ್ಕಳ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ನನ್ನನ್ನು ತುಂಬಾ ಕಾಡುತ್ತದೆ ಎಂದು 12 ವರ್ಷದ ಬಾಲಕಿ ಪ್ರಧಾನಿಗೆ ಬರೆದ ಪತ್ರದಲ್ಲಿ ಅವಲತ್ತುಕೊಂಡಿದ್ದಾರೆ.

ಪ್ರತಿ ವರ್ಷ ಭಾರತದ ಅನೇಕ ಭಾಗಗಳಲ್ಲಿ ಗಾಳಿಯು ತುಂಬಾ ಕಲುಷಿತಗೊಳ್ಳುತ್ತದೆ. ಅಕ್ಟೋಬರ್‌ ಅನಂತರ ಉಸಿರಾಡಲು ತುಂಬಾ ಕಷ್ಟವಾಗುತ್ತದೆ. ನಾವು ಈ ಬಗ್ಗೆ ಯೋಚಿಸಬೇಕು ಮತ್ತು ಇದಕ್ಕಾಗಿ ಏನಾದರೂ ಮಾಡಬೇಕು. ದಟ್ಟವಾದ ನಗರಗಳಲ್ಲಿ ಗಾಳಿ ಹೆಚ್ಚು ಕಲುಷಿತಗೊಳ್ಳುತ್ತಿದೆ. ಅಲ್ಲಿ ವಾಸಿಸುವ ಜನರಿಗೆ ಇದು ತುಂಬಾ ಅಪಾಯಕಾರಿ. ಇದು ಮುಂಬರುವ ದಿನಗಳಲ್ಲಿ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ನೀವು ಹವಾಮಾನ ಬದಲಾವಣೆಯ ಅನಿವಾರ್ಯತೆಯನ್ನು ಒಪ್ಪಿಕೊಂಡಿದ್ದೀರಿ. ಇಂದು ದೇಶದ ಎಲ್ಲ ಮಕ್ಕಳ ಪರವಾಗಿ, ಬ್ಲೂ ಸ್ಕೈಗಾಗಿ ಅಂತಾರಾಷ್ಟ್ರೀಯ ಶುದ್ಧ ಗಾಳಿ ದಿನದಂದು, ದಯವಿಟ್ಟು ನಮ್ಮ ಭವಿಷ್ಯದ ಬಗ್ಗೆ ಯೋಚಿಸಲು ನಾನು ನಿಮಗೆ ವಿನಂತಿಯನ್ನು ಮಾಡಬಯಸುತ್ತೇನೆ. ಭಾರತದ ನಾಗರಿಕರು ಶುದ್ಧ ಗಾಳಿಯನ್ನು ಉಸಿರಾಡಲು ಎಲ್ಲ ನಿಯಮಗಳು ಮತ್ತು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನೀವು ಕಟಿಬದ್ಧರಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement

ವಿಶ್ವಸಂಸ್ಥೆಯ ಉದ್ದೇಶ
ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ತನ್ನ 74ನೇ ಅಧಿವೇಶನದಲ್ಲಿ ಬ್ಲೂ ಸ್ಕೈಗಾಗಿ ಅಂತಾರಾಷ್ಟ್ರೀಯ ಶುದ್ಧ ಗಾಳಿ ದಿನವನ್ನು ಆಚರಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಆದಿಯಾಗಿ ಸೆ. 7ರಂದು ಅಂತಾರಾಷ್ಟ್ರೀಯ ಶುದ್ಧ ಗಾಳಿ ದಿನವನ್ನು ಆಚರಿಸಲಾಗುತ್ತದೆ. ಶುದ್ಧ ಗಾಳಿಯ ಮಹತ್ವದ ಬಗ್ಗೆ ವ್ಯಕ್ತಿ, ಸಮುದಾಯ, ಕಾರ್ಪೊರೇಟ್‌ ಮತ್ತು ಸರಕಾರಕ್ಕೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಶುದ್ಧ ಗಾಳಿ ದಿನ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ವಾಯುಮಾಲಿನ್ಯದಿಂದ ಹೆಚ್ಚು ಪರಿಣಾಮ ಬೀರುವ ದೇಶ ಭಾರತ. ದೇಶವು ಇಂದು 90 ಮಿಲಿಯನ್‌ ಟನ್‌ ಕಲ್ಲಿದ್ದಲು, 40 ಮಿಲಿಯನ್‌ ಟನ್‌ ಜೀವರಾಶಿ, 200 ಮಿಲಿಯನ್‌ ಟನ್‌ ತೈಲ ಮತ್ತು 50 ಮಿಲಿಯನ್‌ ಟನ್‌ ಅನಿಲವನ್ನು ಬಳಸುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next