ಕೊಪ್ಪಳ: ತುಂಗಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು ಕೇವಲ ಒಂದೇ ದಿನದಲ್ಲಿ ಜಲಾಶಯಕ್ಕೆ ಬರೋಬ್ಬರಿ 12 ಟಿಎಂಸಿ ನೀರು ಹರಿದು ಬಂದಿದೆ.
ಮಲೆನಾಡು ಹಾಗೂ ಶಿವಮೊಗ್ಗ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಒಳಹರಿವಿನಲ್ಲಿ ಕೇವಲ 3-4 ಸಾವಿರ ಕ್ಯೂಸೆಕ್ ಇತ್ತು.ಆದರೆ ಮಲೆನಾಡು ಭಾಗದಲ್ಲಿ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ತುಂಗಾ ನದಿಯಿಂದ ಕಳೆದೆರಡು ದಿನದ ಹಿಂದೆ ನದಿ ಪಾತ್ರಕ್ಕೆ 80 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಹಾಗಾಗಿ ನದಿ ಪಾತ್ರಗಳ ಮೂಲಕ ತುಂಗಭದ್ರಾ ನದಿಗೆ ನೀರು ಹರಿದು ಬಂದಿದೆ.
ಶನಿವಾರ ತುಂಗಭದ್ರಾ ಜಲಾಶಯದಲ್ಲಿ 71 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಕೇವಲ 24 ಗಂಟೆಯಲ್ಲಿ ಅಂದರೆ, ರವಿವಾರ ಒಂದೇ ದಿನ ಬರೋಬ್ಬರಿ 12 ಟಿಎಂಸಿ ನೀರು ಹರಿದು ಬಂದಿದೆ. ಪ್ರಸ್ತುತ ಜಲಾಶಯದಲ್ಲಿ 83 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರಸ್ತುತ ಒಳಹರಿವಿನ ಪ್ರಮಾಣವೂ ಒಂದು ಲಕ್ಷ ನಲವತ್ತು ಸಾವಿರ ಕ್ಯೂಸೆಕ್ ನಷ್ಟು ಇದೆ.
ಇದನ್ನೂ ಓದಿ:ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಮರೆಯಬೇಡಿ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ
ನೀರಿನ ಪ್ರಮಾಣ ಅಧಿಕವಾಗಿ ಬರುತ್ತಿರುವುದರಿಂದ ತುಂಗಭದ್ರಾ ನೀರಾವರಿ ಇಲಾಖೆಯ ಅಧಿಕಾರಿಗಳು ಮುನ್ಸೂಚಿತವಾಗಿ ನದಿ ಪಾತ್ರದಲ್ಲಿನ ಎಲ್ಲ ಗ್ರಾಮಗಳಿಗೆ ಎಚ್ಚರಿಕೆ ನೀಡಿ, ಜಲಾಶಯದ ನೀರಿನ ಪ್ರಮಾಣ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ನದಿ ಪಾತ್ರದಲ್ಲಿನ ಜನರು ಜಾಗೃತರಾಗಿ ನದಿಪಾತ್ರದ ತಟದಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಿದ್ದಾರೆ. ಡ್ಯಾಮ್ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ರವಿವಾರ ನಾಲ್ಕು ಕ್ರಸ್ಟ್ ಗೇಟುಗಳ ಮೂಲಕ ಹೆಚ್ಚಾದ ನೀರನ್ನು ನದಿ ಪಾತ್ರಗಳ ಹರಿಯ ಬಿಡಲಾಗಿದೆ.