ಸಿಂಧನೂರು: ತಾಲೂಕಿನ ವಿವಿಧೆಡೆಗಳಲ್ಲಿರುವ 12 ನಾಡ ಕಚೇರಿಗಳು ಬಾಡಿಗೆಯ ಕಟ್ಟಡದಲ್ಲೆ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಈ ಹಳೆಯ ಕಟ್ಟಡಗಳು ಶಿಥಿಲಾವಸ್ಥೆಗೊಂಡಿರುವುದರಿಂದ ನಾಡ ಕಚೇರಿಯ ದಾಖಲಾತಿಗಳನ್ನು ಹೇಗೆ ಸಂರಕ್ಷಣೆಯಲ್ಲಿಡಬೇಕೆಂಬುದೇ ತಲೆನೋವಾಗಿ ಪರಿಣಮಿಸಿದೆ.
ಶಾಸಕ ವೆಂಕಟರಾವ್ ನಾಡಗೌಡ ಅವರ ಸ್ವಗ್ರಾಮವಾದ ಜವಳಗೇರಾ, ಸಿಂಧನೂರು, ಜಾಲಿಹಾಳ, ಕುನ್ನಟಗಿ, ಬಾದರ್ಲಿ, ಗೊರೇಬಾಳ, ಸಾಲಗುಂದಾ, ವಲ್ಕಂದಿನ್ನಿ, ಹೆಡಗಿನಾಳ, ತುರ್ವಿಹಾಳ, ಗುಂಜಳ್ಳಿ, ಹುಡಾ ಈ ಕಡೆಗಳೆಗಳಲ್ಲಿ ನಾಡ ಕಚೇರಿಗಳಿದ್ದು. ಒಂದೊಂದು ನಾಡ ಕಚೇರಿಗೆ10 ರಿಂದ 4 ಹಳ್ಳಿಗಳು ವ್ಯಾಪ್ತಿಗೆ ಒಳಪಡುತ್ತಿದ್ದು, ಇರುವ ಯಾವ ನಾಡ ಕಚೇರಿಗಳಲ್ಲಿ ಮೂಲ ಸಮಸ್ಯೆಗಳ ತಾಂಡವವಾಡುತ್ತಿವೆ. ಜವಳಗೇರಾ ಹಾಗೂ ಜಾಲಿಹಾಳಗಳಲ್ಲಿ ಹೊಸ ಕಟ್ಟಡಗಳು ಪ್ರಾರಂಭವಾಗಿವೆ. ಇನ್ನೂ ಕಾಮಗಾರಿಗಳು ಮುಗಿಯದೆ ಇರುವುದರಿಂದ ಇನ್ನುಳಿದ ನಾಡ ಕಚೇರಿಗಳನ್ನು ಯಾವ ವರ್ಷದಲ್ಲಿ ನಿರ್ಮಾಣ ಮಾಡುತ್ತಾರೆ ಎಂಬುದು ಅನೇಕ ಗ್ರಾಮಸ್ಥರಿಂದ ಮಾತುಗಳು ಕೇಳಿ ಬರುತ್ತಿವೆ.
ದಾಖಲಾತಿಗಳದ್ದೆ ಚಿಂತೆ: ಶಿಥಿಲಾವಸ್ಥೆಯಲ್ಲಿರುವ ನಾಡ ಕಾರ್ಯಾಲಯಗಳಲ್ಲಿ ದಾಖಲಾತಿಗಳು ನೀರಿನಲ್ಲಿ ತೋಯುತ್ತಿದ್ದು, ಈ ದಾಖಲೆಗಳನ್ನು ಹೇಗೆ ಸಂರಕ್ಷಣೆ ಮಾಡಬೇಕೆನ್ನುವುದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ದೊಡ್ಡ ಚಿಂತೆಯಾಗಿದೆ. ಹೆಚ್ಚಿನ ಜನಸಂದಣಿ ಹೊಂದಿದ ಕ್ಷೇತ್ರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ವ್ಯವಹಾರಿಕ ದಾಖಲಾತಿಗಳನ್ನು ಪಡೆಯಲು ನಾಡ ಕಚೇರಿ ಮುಖ್ಯವಾಗಿದ್ದು, ಇಂತಹ ಶಿಥಿಲಾವಸ್ಥೆಯಲ್ಲಿನ ನಾಡ ಕಚೇರಿಗಳನ್ನು ಕೂಡಲೇ ಸಂಬಂಧಿಸಿದ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸರಿಪಡಿಸಬೇಕೆಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.
ತಾಲೂಕಿನಲ್ಲಿ ಒಟ್ಟು 12 ನಾಡ ಕಚೇರಿಗಳು ಬಾಡಿಗೆಯ ಕಟ್ಟಡದಲ್ಲಿವೆ. ಕೆಲವೊಂದು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಸರಿಪಡಿಸಲು ಸಂಬಂಧಿಸಿದ ಮೇಲಿನ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಯಾವುದೇ ದಾಖಲಾತಿ ಹಾಳಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗುವುದು.
-ಮಂಜುನಾಥ ಭೋಗಾವತಿ, ತಹಶೀಲ್ದಾರ್.
12 ನಾಡ ಕಚೇರಿಗಳ ಪೈಕಿ 2 ನಾಡ ಕಚೇರಿಗಳನ್ನು ಸ್ವಂತ ಕಟ್ಟಡ ಶೀಘ್ರದಲ್ಲೇ ಕಾಮಗಾರಿಗಳು ಮುಗಿಯುತ್ತವೆ. ಪ್ರತಿವರ್ಷ ಮೂರರಿಂದ ನಾಲ್ಕು ಸ್ವಂತ ಕಟ್ಟಡಗಳು ಹಾಗೂ ಅವುಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗಿದೆ.
-ವೆಂಕಟರಾವ್ ನಾಡಗೌಡ, ಶಾಸಕರು.
-ಚಂದ್ರಶೇಖರ್ ಯರದಿಹಾಳ