Advertisement

ವ್ಯಾಘ್ರ ಗರ್ಜನೆ ಕೇಳಿ ಹೃದಯ ಒಡೆದು ಸತ್ತ ಕೋತಿಗಳು!

06:55 AM Sep 13, 2017 | Team Udayavani |

ಹೊಸದಿಲ್ಲಿ: ಸಿಂಹ, ಹುಲಿ ಗರ್ಜಿಸಿದರೆ ಸಾಕು ಎಂಥವರ ಎದೆಯೂ ಝಲ್ಲೆ ನ್ನುತ್ತದೆ. ಬೋನಿನಲ್ಲಿದ್ದುಕೊಂಡೇ ಎದುರಿಗೆ ಬಂದು ಗರ್ಜಿಸಿದರೆ ಅರೆಕ್ಷಣ ಉಸಿರುನಿಂತು ಹೋದ ಅನುಭವ ಆಗುವುದರಲ್ಲಿ ಯಾವ ಸಂದೇಹವಿಲ್ಲ. ಅಪ್ಪಿ-ತಪ್ಪಿ ಬೋನಿಂದಾಚೆ ಬಂದು ಎದುರು ನಿಂತು ಗರ್ಜಿಸಿದರೆ ಹೇಗಾಗ ಬೇಡ. ಆದರೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಕಾಡಿನಲ್ಲಿರುವ ಹುಲಿ ರಾಯನ ಗರ್ಜನೆಗೆ ಕೆಲವು ಕೋತಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ.

Advertisement

ಅಲ್ಲಿ ನಡೆದಿದ್ದೇನು?: ಉತ್ತರ ಪ್ರದೇಶದ ಕೊತ್ವಾಲಿ ಮೊಹಮ್ಮದಿ ಅರಣ್ಯ ವಲಯದಲ್ಲಿ ಇತ್ತೀಚೆಗೆ 12ಕ್ಕೂ ಹೆಚ್ಚು ಕೆಮ್ಮುಖದ ಕೋತಿಗಳು ಒಂದೇ ಸ್ಥಳದಲ್ಲಿ ಪ್ರಾಣಬಿಟ್ಟಿದ್ದವು. ಸ್ಥಳೀಯ ಕೆಲ ಮಂದಿ ಇದನ್ನು ನೋಡಿ ಅರಣ್ಯ ಇಲಾಖೆ ಸಿಬಂದಿಗೆ ಮಾಹಿತಿ ನೀಡಿದ್ದರು. ವೈದ್ಯರ ಸಮೇತ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳಿಗೆ ಅಚ್ಚರಿಯೊಂದು ಕಾದಿತ್ತು. ಸ್ಥಳ ಪರಿಶೀಲನೆ ನಡೆಸಿದ ಪಶುವೈದ್ಯರು ಸಾವಿಗೀಡಾದ ಕೋತಿಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಎಲ್ಲಾ ಕೋತಿಗಳೂ ಒಂದೇ ಸಮಯದಲ್ಲಿ ಹೃದಯಾಘಾತದಿಂದ ಸತ್ತಿವೆ ಎಂದು ವರದಿ ನೀಡಿದರು.

ಭಯದಿಂದ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಹೆಚ್ಚು ಎಂದೂ ಅಭಿಪ್ರಾಯಪಟ್ಟರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶುವೈದ್ಯಾಧಿಕಾರಿ ಡಾ| ಬ್ರಿಜೇಂದರ್‌ ಸಿಂಗ್‌, “ವನ್ಯಜೀವಿಗಳು ಬಹುಸಂಖ್ಯೆಯಲ್ಲಿ ಪ್ರಾಣ ಬಿಟ್ಟಿದ್ದರೆ ಅದಕ್ಕೆ ಸೋಂಕು ತಗುಲಿರುವ ಸಾಧ್ಯತೆಗಳೇ ಹೆಚ್ಚು’ ಎಂದಿದ್ದಾರೆ.

ಅಧ್ಯಯನ ಯೋಗ್ಯವಾಗಿತ್ತು!
ಅರಣ್ಯಾಧಿಕಾರಿಗಳು ಹಾಗೂ ಕೆಲ ವನ್ಯಜೀವಿ ತಜ್ಞರಿಗೆ ಈ ಪ್ರಕರಣ ಅಧ್ಯಯನಯೋಗ್ಯ ಎನಿಸಿದೆ. ತನಿಖೆ ನಡೆಸಿದಾಗ ಆ ಪ್ರದೇಶದಲ್ಲಿ ಹುಲಿಗಳು ಓಡಾಡಿರುವ ಹೆಜ್ಜೆ ಗುರುತುಗಳೂ ಕಾಣಿಸಿಕೊಂಡಿವೆ. ಅರಣ್ಯ ವಲಯದ ಗಾರ್ಡ್‌ಗಳು ಹೇಳುವಂತೆ ಆ ಭಾಗದಲ್ಲಿ ಹುಲಿಗಳ ಓಡಾಟ ಜಾಸ್ತಿ. ವೈದ್ಯರು ಅಂದಾಜಿಸಿದ ನಿಖರ ಅವಧಿಯಲ್ಲಿ ಹುಲಿಗಳು ಗರ್ಜಿಸಿದ ಧ್ವನಿ ಕೇಳಿಸಿತ್ತು ಎಂದೂ ಹೇಳಿದ್ದಾರೆ. ಹೀಗಾಗಿ ಕೋತಿಗಳ ಸಾವಿಗೆ ಹುಲಿರಾಯನ ಭಾರೀ ಗರ್ಜನೆಯೇ ಕಾರಣ ಇರಬಹುದು ಎಂದು ಕೆಲ ವನ್ಯಜೀವಿ ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೆ ಈ ವಾದವನ್ನು ಇನ್ನು ಕೆಲ ತಜ್ಞರು ನಿರಾಕರಿಸಿದ್ದು, ಬೇರೆಯೇ ಕಾರಣ ಇರಬಹುದೆನ್ನುವ ಸಂದೇಹ ವ್ಯಕ್ತಪಡಿಸಿದ್ದಾರೆ.

ಕೋತಿಗಳು ಹೃದಯಾಘಾತದಿಂದಲೇ ಸಾವಿಗೀಡಾಗಿವೆ. ಮರಣೋತ್ತರ ಪರೀಕ್ಷೆಯಲ್ಲಿ ಇದು ಖಚಿತಗೊಂಡಿದೆ. ಆದರೆ ನಿಖರವಾಗಿ  ಹೃದಯಾಘಾತಕ್ಕೆ ಕಾರಣ ಇದೇ ಎಂದು ಹೇಳಲು ಸಾಧ್ಯವಿಲ್ಲ.
-ಡಾ| ಸಂಜೀವ್‌ ಕುಮಾರ್‌, ಪಶುವೈದ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next