ಕೋಲ್ಕತಾ: ಪ್ರತಿಭಟನಕಾರರ ಮೇಲೆ ಪೊಲೀಸರ ದಬ್ಬಾಳಿ ಕೆಯನ್ನು ಖಂಡಿಸಿ ಬಿಜೆಪಿಯು ಬುಧವಾರ(ಆ28) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 12 ಗಂಟೆ ಪಶ್ಚಿಮ ಬಂಗಾಳ ಬಂದ್‌ಗೆ ಕರೆ ನೀಡಿದ್ದು, ಹಲವು ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಗಿ ಬಂದೋಬಸ್ತ್ ನಡೆಸಿರುವ ಪೊಲೀಸರು ಈಗಾಗಲೇ ಹಲವು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮಂಗಳವಾರ “ನಬನ್ನಾ ಅಭಿಜಾನ್'(ಸರಕಾರಿ ಸಚಿವಾಲಯ ಕಟ್ಟಡ ಮುತ್ತಿಗೆ) ಕರೆ ಹಿನ್ನೆಲೆಯಲ್ಲಿ ಕೋಲ್ಕತಾದ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿ, ಸಚಿವಾಲಯ ಕಟ್ಟಡಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದರು. ಈ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ನಡೆದಿತ್ತು.
ಹೌರಾದಲ್ಲಿ ಸರಕಾರಿ ಬಸ್ಸಿನ ಚಾಲಕರು ಹೆಲ್ಮೆಟ್ ಧರಿಸಿರುವುದು ಕಂಡುಬಂದಿದೆ. ಇವತ್ತು ಬಂದ್ ಕರೆ ನೀಡಲಾಗುವ ಕಾರಣ ಸುರಕ್ಷತೆಗಾಗಿ ಹೆಲ್ಮೆಟ್ ಹಾಕಿಕೊಂಡಿದ್ದೇವೆ ಎಂದು ಬಸ್ ಚಾಲಕರೊಬ್ಬರು ಹೇಳಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಬಂದ್ ಕರೆ ಕುರಿತು ಪ್ರತಿಕ್ರಿಯಿಸಿ ‘ಮಮತಾ ಬ್ಯಾನರ್ಜಿಯವರ ನಿರಂಕುಶ ಆಡಳಿತಕ್ಕೆ ಬಂದ್ ಅಗತ್ಯ ಪ್ರತಿಕ್ರಿಯೆಯಾಗಿದೆ ಟಿಎಂಸಿ ಸರಕಾರವು ಪ್ರಕರಣದಲ್ಲಿ ನ್ಯಾಯಕ್ಕಾಗಿ ಸಾರ್ವಜನಿಕರ ಬೇಡಿಕೆಯನ್ನು ನಿರ್ಲಕ್ಷಿಸಿದೆ ಎಂದು ಕಿಡಿ ಕಾರಿದ್ದಾರೆ.
ಬಂಗಾಳದ ವಿಪಕ್ಷ ನಾಯಕ ಸುವೆಂದು ಅಧಿಕಾರಿ ಪ್ರತಿಕ್ರಿಯಿಸಿ ‘ಶಾಂತಿಯುತ ವಿದ್ಯಾರ್ಥಿ ಮೆರವಣಿಗೆ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿರುವುದು ಖಂಡನೀಯ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.