ಮುಂಬೈ: ವೃತ್ತಿಪರ ಕ್ರಿಕೆಟಿಗರಾಗಬೇಕು ಎಂಬ ಕಾರಣದಿಂದ ಅದೆಷ್ಟೋ ಆಟಗಾರರು ತಮ್ಮ ಶೈಕ್ಷಣಿಕ ಜೀವನವನ್ನು ಅರ್ಧಕ್ಕೆ ತೊರೆಯುತ್ತಾರೆ. ಅದೆಷ್ಟೋ ಕ್ರಿಕೆಟಿಗರು ತಮ್ಮ 12ನೇ ತರಗತಿ ಶಿಕ್ಷಣವನ್ನೂ ಪೂರ್ಣಗೊಳಿಸುವುದಿಲ್ಲ. ಆದರೆ ಇಲ್ಲೊಬ್ಬರು 12ನೇ ತರಗತಿಯ ಪರೀಕ್ಷೆಗಾಗಿ ಅಂತಾರಾಷ್ಟ್ರೀಯ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.
ಹೌದು, ಭಾರತೀಯ ವನಿತಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (Richa Ghosh) ತನ್ನ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ನ್ಯೂಜಿಲ್ಯಾಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. 21 ವರ್ಷಕ್ಕೆ ಕಾಲಿಟ್ಟಿರುವ ಘೋಷ್ ಅವರು 16 ವರ್ಷ ವಯಸ್ಸಿನಿಂದ ಅಂದರೆ 2020 ರಿಂದ ಭಾರತದ ಅಂತಾರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ.
ಕಿವೀಸ್ ವನಿತೆಯರ ವಿರುದ್ದದ ಸರಣಿಗೆ ವಿಕೆಟ್ ಕೀಪರ್ ಗಳಾಗಿ ಯಾಸ್ತಿಕಾ ಭಾಟಿಯಾ ಮತ್ತು ಉಮಾ ಚೆತ್ರಿ ಆಯ್ಕೆಯಾಗಿದ್ದಾರೆ.
ಟಿ20 ವಿಶ್ವಕಪ್ ಬಳಿಕ ನ್ಯೂಜಿಲ್ಯಾಂಡ್ ವನಿತಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಅ.24,27 ಮತ್ತು 29ರಂದು ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಮೂರು ಪಂದ್ಯಗಳು ಅಹಮದಾಬಾದ್ ನಲ್ಲಿ ನಡೆಯಲಿದೆ.
ವೇಗದ ಬೌಲಿಂಗ್ ಆಲ್‌ರೌಂಡರ್ ಗಳಾದ ಸಯಾಲಿ ಸತ್‌ಘರೆ ಮತ್ತು ಸೈಮಾ ಠಾಕೋರ್, ಲೆಗ್‌ಸ್ಪಿನ್ನರ್ ಪ್ರಿಯಾ ಮಿಶ್ರಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ತೇಜಲ್ ಹಸಬ್ನಿಸ್ ಮೊದಲ ಬಾರಿ ಏಕದಿನ ತಂಡದ ಕರೆ ಪಡೆದಿದ್ದಾರೆ.
ಗಾಯದ ಕಾರಣ ಲೆಗ್‌ಸ್ಪಿನ್ನರ್ ಆಶಾ ಶೋಭನಾ ಆಯ್ಕೆಗೆ ಅಲಭ್ಯರಾಗಿದ್ದರೆ, ಆಲ್ ರೌಂಡರ್ ಪೂಜಾ ವಸ್ತ್ರಾಕರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಭಾರತೀಯ ತಂಡ
ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ (ಉ.ನಾ), ಶಫಾಲಿ ವರ್ಮಾ, ಡಿ ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿ.ಕೀ), ಉಮಾ ಚೆಟ್ರಿ (ವಿ.ಕೀ), ಸಯಾಲಿ ಸತ್‌ಘರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ತೇಜಲ್ ಹಸಬ್ನಿಸ್ ಠಾಕೂರ್, ಪ್ರಿಯಾ ಮಿಶ್ರಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್.