Advertisement
ನಗರದ ಎಪಿಎಂಸಿ ರಸ್ತೆಯಾಗಿ ಉಪ್ಪಿನಂಗಡಿ ರಸ್ತೆಗೆ ನಿಕಟ ಸಂಪರ್ಕ ಇದೆ. ಇಲ್ಲಿ ರೈಲ್ವೇ ಲೆವೆಲ್ ಕ್ರಾಸಿಂಗ್ ಇದ್ದು, ದಿನವೊಂದಕ್ಕೆ ಏಳೆಂಟು ಬಾರಿ ರೈಲ್ವೇ ಗೇಟ್ ಹಾಕುತ್ತಿರುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಮೇಲ್ಸೇತುವೆ ಇಲ್ಲವೇ ಕೆಳ ಸೇತುವೆ ನಿರ್ಮಿಸಬೇಕು ಎಂಬ ದಶಕದ ಬೇಡಿಕೆ ಈಡೇರಿಕೆ ಈಗ ಕಾಲ ಸನ್ನಿಹಿತವಾಗಿದೆ.
2014ರಲ್ಲಿ ರಾಜ್ಯ ಸರಕಾರಕ್ಕೆ ಮೇಲ್ಸೇತುವೆ ನಿರ್ಮಾಣದ ಅಂದಾಜು ಪಟ್ಟಿ ಎಪಿಎಂಸಿ ಕಳಿಸಿತ್ತು. 25 ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷೆ ಮಾಡಲಾಗಿತ್ತು. ಇದರಲ್ಲಿ 12.5 ಕೋಟಿ ರಾಜ್ಯ ಭರಿಸಬೇಕು. ಉಳಿದ ಮೊತ್ತ ರೈಲ್ವೇ ಇಲಾಖೆ ಭರಿಸಬೇಕು. ಅಂದರೆ 2 ಕೋಟಿ ರೂ.ಗಳಿಗಿಂತ ಮಿಕ್ಕಿದ ಸಾರ್ವಜನಿಕ ಯೋಜನೆಯನ್ನು ರೈಲ್ವೇ ಅನುಷ್ಠಾನ ಮಾಡಬೇಕಾದರೆ ರಾಜ್ಯ ಸರಕಾರ ಮತ್ತು ಅದರ ಅಂಗ ಸಂಸ್ಥೆಗಳು ಸೇರಿ ಅರ್ಧ ಮೊತ್ತ ಭರಿಸಬೇಕೆಂಬುದು ನಿಯಮ. ಈ ಮೊತ್ತವನ್ನು ತಾನು ಭರಿಸುವುದಾಗಿ ಸರಕಾರ ಲಿಖೀತ ಭರವಸೆಯನ್ನು ರೈಲ್ವೇಗೆ ನೀಡಿ, ಶೇ. 50ರಷ್ಟು ಹಣ ರೈಲ್ವೇಗೆ ಠೇವಣಿ ಮಾಡಿದ ಮೇಲಷ್ಟೇ ಕಾಮಗಾರಿಯನ್ನು ರೈಲ್ವೇ ಕೈಗೆತ್ತಿಕೊಳ್ಳುತ್ತದೆ. ಆದರೆ 25 ಕೋ.ರೂ.ವೆಚ್ಚದ ಕಾಮಗಾರಿಯಲ್ಲಿ ಅರ್ಧ ಮೊತ್ತ ಪಾವತಿಗೆ ಸರಕಾರದ ಸಹಮತ ಸಿಗಲಿಲ್ಲ. ಹೀಗಾಗಿ ವೆಚ್ಚದ ಗಾತ್ರ ತಗ್ಗಿಸುವ ಸಲುವಾಗಿ ಕೆಳಸೇತುವೆ ನಿರ್ಮಾಣದ ಕುರಿತಂತೆ ಎಂಜಿನಿಯರ್ ಮೂಲಕ ಎರಡನೇ ಹಂತದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 12 ಕೋ.ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣ ಸಾಧ್ಯ ಎಂಬ ಅಂದಾಜನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಇದಕ್ಕೆ ಸರಕಾರ ಕೂಡ ಸಮ್ಮತಿ ಸೂಚಿಸಿತು. ಹಣ ಡಿಪಾಸಿಟ್‌ಗೆ ಸರಕಾರ ಸಿದ್ಧತೆ
ಕೆಳ ಸೇತುವೆ ನಿರ್ಮಾಣಕ್ಕೆ 12 ಕೋ.ರೂ.ತಗಲಿದೆ. ಇದರಲ್ಲಿ ಅಂಡರ್‌ಪಾಸ್‌ನಿಂದ ಹೆಬ್ಟಾರ್‌ಬೈಲಿಗೆ ತೆರಳುವ ರಸ್ತೆಗೆ ನೇರ ಸಂಪರ್ಕ ನೀಡಲಾಗುತ್ತದೆ. ಬೈಪಾಸು ಕೂಡ ನಿರ್ಮಾಣ ಆಗಲಿದೆ. ಅನುದಾನಕ್ಕೆ ಸಂಬಂಧಿಸಿ ಶೇ.50 ರಷ್ಟು ಮೊತ್ತ ಭರಿಸಲು ರೈಲ್ವೇ ಇಲಾಖೆ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ಉಳಿದ ಶೇ. 50ರ ಮೊತ್ತಕ್ಕೆ ರಾಜ್ಯ ಮೂಲ ಸೌಕರ್ಯ ಇಲಾಖೆ ಹಾಗೂ ಎಪಿಎಂಸಿ ಒಡಂಬಡಿಕೆ ಮಾಡಿಕೊಂಡು ಅನುದಾನವನ್ನು ರೈಲ್ವೇ ಇಲಾಖೆಗೆ ರಾಜ್ಯ ಸರಕಾರದ ಮೂಲಕ ನೀಡಬೇಕಿದೆ. ಕೆಲ ದಿನಗಳ ಹಿಂದೆಯಷ್ಟೇ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ನೇತೃತ್ವದಲ್ಲಿ ರಾಜ್ಯ ಮೂಲಸೌಕರ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅದಕ್ಕೆ ಬೇಕಾದ ಅಗತ್ಯ ಪತ್ರವನ್ನು ಎಪಿಎಂಸಿ ನೀಡಿದೆ. ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿ ಸರಕಾರ ರೈಲ್ವೇ ಖಾತೆಗೆ ಹಣ ಠೇವಣಿ ಮಾಡಲಿದೆ. ಆ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೀಗಾಗಿ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿದೆ.
Related Articles
ಅನುದಾನಕ್ಕೆ ಸಂಬಂಧಿಸಿ ಶೇ. 50ರನ್ನು ಭರಿಸಲು ರೈಲ್ವೇ ಇಲಾಖೆ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ರಾಜ್ಯದ ಮೂಲ ಸೌಕರ್ಯ ಇಲಾಖೆ ಹಾಗೂ ಎಪಿಎಂಸಿ ಒಡಂಬಡಿಕೆ ಮಾಡಿಕೊಂಡು ಉಳಿದ ಶೇ.50 ರಷ್ಟು ಅನುದಾನವನ್ನು ರೈಲ್ವೇ ಇಲಾಖೆಗೆ ರಾಜ್ಯ ಸರಕಾರ ನೀಡಬೇಕಿದೆ. ಅನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ಆ ಪ್ರಕ್ರಿಯೆ ಪ್ರಗತಿಯಲ್ಲಿದೆ.
-ದಿನೇಶ್ ಮೆದು, ಅಧ್ಯಕ್ಷರು, ಎಪಿಎಂಸಿ ಪುತ್ತೂರು
Advertisement