Advertisement

12 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಅವೈಜ್ಞಾನಿಕ

09:42 PM Aug 26, 2019 | Lakshmi GovindaRaj |

ಎಚ್‌.ಡಿ.ಕೋಟೆ: ಪಟ್ಟಣದಿಂದ ನಾಗರಹೊಳೆ ಹಾಗೂ ತಾಲೂಕಿನ ಹತ್ತಾರು ಗ್ರಾಮಗಳು ಸೇರಿದಂತೆ ಕೊಡಗು ಜಿಲ್ಲೆಯ ಬಾಳಲೇ, ವೀರಾಜಪೇಟೆ ಮತ್ತು ಕುಟ್ಟ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮೂರ್ಕಲ್‌ ರಸ್ತೆ ಡಾಂಬರೀಕರಣ ಕಾಮಗಾರಿ ಮಳೆ ನಡುವೆಯೇ ಆರಂಭಗೊಂಡಿದ್ದು, ಗುಣಮಟ್ಟ ಹಾಗೂ ಅವೈಜ್ಞಾನಿಕ ಕಾಮಗಾರಿ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ರಸ್ತೆಯಲ್ಲಿ ಗುಂಡಿಗಳು: ಇದೇ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ತಾಲೂಕು ಬಸ್‌ ಘಟಕ ಇದ್ದು, ಘಟಕದ ನೂರಾರು ಬಸ್‌ಗಳು ಸೇರಿದಂತೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅನೇಕ ವರ್ಷಗಳ ರಸ್ತೆಗೆ ಹಾಕಲಾಗಿದ್ದ ಡಾಂಬರ್‌ ಕಿತ್ತು ರಸ್ತೆಯಲ್ಲಿ ದೊಡ್ಡ ಗುಂಡಿ ಸೃಷ್ಟಿಯಾಗಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿತ್ತು.

12 ಕೋಟಿ ವೆಚ್ಚದ ಯೋಜನೆ: ಪ್ರತಿದಿನ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅನುಭವಿಸುತ್ತಿರುವ ಯಾತನೆ ಹಾಗೂ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪಟ್ಟಣದಿಂದ ತಾಲೂಕಿನ ಕಲ್ಲಹಟ್ಟಿ ಗ್ರಾಮದವರೆಗೆ 12 ಕಿ.ಮೀ. ರಸ್ತೆಯನ್ನು 12 ಕೋಟಿ ರೂ.ವೆಚ್ಚ (ಸಿಆರ್‌ಎಫ್‌ ಅನುದಾನ)ದಲ್ಲಿ ರಸ್ತೆಗೆ ನೂತನ ಡಾಂಬರೀಕರಣಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು.

ಕಳಪೆ ಕಾಮಗಾರಿ: ಸುಮಾರು ಒಂದು ತಿಂಗಳಿನಿಂದ ಈ ಭಾಗದಲ್ಲಿ ಭಾರೀ ಮಳೆಯಾಗಿ ರಸ್ತೆ ಮೇಲೆ ಹರಿಯುತ್ತಿದ್ದ ನೀರು ಅಲ್ಲಲ್ಲಿ ನಿಂತಿದ್ದರೂ ಗುತ್ತಿಗೆದಾರ ಮಾತ್ರ ಮಳೆಯ ನಡುವೆಯೇ ಕಾಮಗಾರಿ ನಡೆಸುತ್ತಿದ್ದಾರೆ. ಮಳೆಯ ನಡುವೆಯೇ ಕಾಮಗಾರಿ ನಡೆದರೆ ರಸ್ತೆ ಕಳಪೆಯಾಗುತ್ತದೆ ಎಂದು ನಾಗರಿಕರು ದೂರಿದ್ದಾರೆ.

ಅವೈಜ್ಞಾನಿಕ ಕಾಮಗಾರಿ: ಇದು ತುಂಬಾ ವರ್ಷದ ಹಿಂದೆ ನಿರ್ಮಾಣವಾಗಿದ್ದ ರಸ್ತೆಯಾಗಿದ್ದು, ರಸ್ತೆಗೆ ಹಿಂದೆ ಹಾಕಲಾಗಿದ್ದ ಹಳೆ ಡಾಂಬರ್‌ ಮತ್ತು ಸತ್ವ ಕಳೆದುಕೊಂಡಿರುವ ಮಣ್ಣುನ್ನು ತೆಗೆದು, ಕೆಲವು ಕಡೆ ರಸ್ತೆಯ ಎತ್ತರವನ್ನು ಹೆಚ್ಚಿಸಿ ಹಂತ ಹಂತವಾಗಿ ಜಲ್ಲಿ ಮತ್ತು ಗುಣಮಟ್ಟದ ಗ್ರಾವೆಲ್‌ ಮಣ್ಣು, ವೆಟ್‌ಮಿಕ್ಸ್‌ ಹಾಕಿ ರೋಲರ್‌ ಮಾಡಿ ನಂತರ ಡಾಂಬರೀಕರಣ ಮಾಡಬೇಕು ಎನ್ನುವ ನಿಯಮ ಇದೆ.

Advertisement

ಅದರೆ, ಗುತ್ತಿಗೆದಾರ ಮಾತ್ರ ಹಳೆಯ ರಸ್ತೆಯ ಮೇಲಿದ್ದ ಹಳಿದುಳಿದ ಹಳೆ ಡಾಂಬರನ್ನು ಸರಿಯಾಗಿ ತೆರವು ಮಾಡದೆ ಅದರ ಮೇಲೆಯೇ ಜಲ್ಲಿ ಮಣ್ಣು ಸುರಿದು ಡಾಂಬರೀಕರಣಕ್ಕೆ ಮುಂದಾಗಿದ್ದರು. ಇದನ್ನು ಕಂಡ ಪಟ್ಟಣದ ನಾಗರಿಕರು ಸ್ಥಳದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ವ್ಯಕ್ತಿ¤ಯನ್ನು ಪ್ರಶ್ನಿಸಿ, ನಂತರ ಕರೆ ಮಾಡಿ ಇಲ್ಲಿನ ಅವ್ಯವಸ್ಥೆ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸ್ಥಳ ಪರಿಶೀಲನೆ: ನಂತರ ಸ್ಥಳಕ್ಕೆ ದೌಡಾಯಿಸಿ ಬಂದ ಕಿರಿಯ ಎಂಜಿನಿಯರ್‌ ಕಾಮಗಾರಿ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಹಳೆ ಡಾಂಬರನ್ನು ಪೂರ್ಣ ಪ್ರಮಾಣದಲ್ಲಿ ತೆಗೆದು ಕಾಮಗಾರಿ ನಡೆಸಲು ಸೂಚಿಸಿದರು. ಸ್ಥಳದಲ್ಲಿದ್ದ ಜನರಿಗೆ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ಕೇಂದ್ರ ಸ್ಥಾನದಲ್ಲಿರುವ ಈ ರಸ್ತೆ ಅದರಲ್ಲೂ ಕೂಗಳತೆ ದೂರದಲ್ಲಿಯೇ ಲೋಕೋಪಯೋಗಿ ಇಲಾಖೆ ಕಚೇರಿ ಇದ್ದರೂ ಕಾಮಗಾರಿ ಉಸ್ತುವಾರಿ ಹೊತ್ತ ಹಿರಿಯ, ಕಿರಿಯ ಅಭಿಯಂತರರ ಅನುಪಸ್ಥಿತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನಾದರೂ ಕ್ಷೇತ್ರದ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮೂರ್ಕಲ್‌ ರಸ್ತೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಗುಣಮಟ್ಟ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಚ್‌.ಡಿ.ಕೋಟೆ ಪಟ್ಟಣದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮೂರ್ಕಲ್‌ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಅಂದಾಜು ಪಟ್ಟಿಯಂತೆ ನಿರ್ವಹಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತೇನೆ.
-ಅನಿಲ್‌ ಚಿಕ್ಕಮಾದು, ಶಾಸಕ

ಈ ಮೊದಲು ರಸ್ತೆ ಚಿಕ್ಕದಾಗಿತ್ತು, ಈಗ ರಸ್ತೆ ಅಗಲೀಕರಣ ಆಗಿರುವುದರಿಂದ ಈ ಹಿಂದೆ ರಸ್ತೆ ಬದಿ ಇದ್ದ ವಿದ್ಯುತ್‌ ಕಂಬ, ಭಾರಿ ಗಾತ್ರದ ಮರಗಳು, ಕುಡಿಯುವ ನೀರಿನ ವಾಲ್‌ಗ‌ಳು ಈಗ ರಸ್ತೆ ಒಳ ಭಾಗಕ್ಕೆ ಬಂದಿವೆ. ಅವುಗಳನ್ನು ಸ್ಥಳಾಂತರ ಮಾಡಿ ಕಾಮಗಾರಿ ನಡೆಸುವಂತೆ ಶಾಸಕರು ಸೂಚಿಸಿದರೂ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇನ್ನೇರಡು ದಿನದಲ್ಲಿ ಸ್ಥಳಾಂತರ ಮಾಡದಿದ್ದರೆ ಕಾಮಗಾರಿಯನ್ನು ತಡೆಯಲಾಗುವುದು.
-ಪುಟ್ಟಬಸವನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ

ರಸ್ತೆ ಕಾಮಗಾರಿಯನ್ನು ಮಳೆಯ ನಡುವೆಯೇ ನಡೆಸುತ್ತಿರುವುದು ಸರಿಯಲ್ಲ. ರಸ್ತೆಗೆ ಹತ್ತಾರೂ ವರ್ಷಗಳ ಹಿಂದೆ ಹಾಕಲಾಗಿದ್ದ ಡಾಂಬರನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯದೆ ಕಾಮಗಾರಿ ನಡೆಸಲಾಗುತ್ತಿದೆ. ಜೊತೆಗೆ ರಸ್ತೆ ಮಧ್ಯೆ ಅಡ್ಡಲಾಗಿ ಹಾಕಬೇಕಿದ್ದ ಡಕ್‌ಗಳನ್ನು ನಿರ್ಮಿಸುತ್ತಿಲ್ಲ. ಈಗ ರಸ್ತೆ ಮಧ್ಯೆ ಇರುವ ಕುಡಿಯುವ ನೀರಿನ ವಾಲ್‌ಗ‌ಳನ್ನು ಸ್ಥಳಾಂತರಿಸಿಲ್ಲ, ಸಂಬಂಧಪಟ್ಟವರು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
-ಶ್ರೀನಿವಾಸ್‌, ಪಟ್ಟಣ ನಿವಾಸಿ

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next