Advertisement

114 ನಮ್ಮ ಕ್ಲಿನಿಕ್‌ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ

12:46 AM Dec 15, 2022 | Team Udayavani |

ಹುಬ್ಬಳ್ಳಿ: ಬಡವರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಉಚಿತವಾಗಿ ತಪಾಸಣೆ,ಚಿಕಿತ್ಸೆ ಹಾಗೂ ಔಷಧ ನೀಡುವ “ನಮ್ಮ ಕ್ಲಿನಿಕ್‌’ ಕೇಂದ್ರಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

Advertisement

ನಗರದ ಬೈರಿದೇವರಕೊಪ್ಪದ ರೇಣುಕಾ ನಗರ ದಲ್ಲಿ ಬುಧವಾರ “ನಮ್ಮ ಕ್ಲಿನಿಕ್‌’ ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ರಾಜ್ಯವ್ಯಾಪಿ 114 ಕ್ಲಿನಿಕ್‌ಗಳಿಗೆ ಮುಖ್ಯಮಂತ್ರಿಗಳು ವರ್ಚುವಲ್‌ ಆಗಿ ಚಾಲನೆ ನೀಡಿದರು. ಮೂರು ಜಿಲ್ಲೆಗಳ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜನರೊಂದಿಗೆ ಸಂವಾದ ನಡೆಸಿದರು.

ನಗರ ಪ್ರದೇಶದ ಬಡವರು, ಸಾಮಾನ್ಯರ ಆರೋಗ್ಯ ಕಾಳಜಿಯೊಂದಿಗೆ ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ಜನವರಿ ಅಂತ್ಯದೊಳಗೆ ಮೊದಲ ಹಂತದ ಎಲ್ಲ 438 ಕೇಂದ್ರಗಳನ್ನು ಆರಂಭಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚ ಭರಿಸಲು ಸಾಧ್ಯವಾಗದೆ ಕಷ್ಟಪಡುತ್ತಿರುವವರಿಗೆ “ನಮ್ಮ ಕ್ಲಿನಿಕ್‌’ಗಳು ಸಹಕಾರಿ ಆಗಲಿವೆ. ಇಲ್ಲಿ ತಪಾಸಣೆ, ಪರೀಕ್ಷೆ, ಚಿಕಿತ್ಸೆ, ಔಷಧ ಎಲ್ಲವೂ ಉಚಿತವಾಗಿ ಲಭ್ಯವಾಗಲಿವೆ ಎಂದರು.

ನಮ್ಮ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ತಂತ್ರಜ್ಞರು, ನರ್ಸಿಂಗ್‌ ಸಿಬಂದಿ ಇದ್ದು, 12 ಪರೀಕ್ಷಾ ಸೇವೆ ನೀಡಲಾಗುತ್ತಿದೆ. ಇಲ್ಲಿನ ಪ್ರಯೋಗಾಲಯ ವನ್ನು ಉನ್ನತೀಕರಿಸಿ ಇನ್ನಷ್ಟು ಸೇವೆ ನೀಡುವ ಚಿಂತನೆಯೂ ಇದೆ. ಜನವರಿಯಿಂದ ರಾಜ್ಯಾದ್ಯಂತ 60 ವರ್ಷ ಮೇಲ್ಪಟ್ಟವರಿಗೆ ಉಚಿತ ನೇತ್ರ ತಪಾಸಣೆ, ಅಗತ್ಯ ಇದ್ದವರಿಗೆ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕಗಳ ನೀಡಿಕೆ ಕಾರ್ಯ ಮಾಡಲಾಗುತ್ತದೆ. ಹುಟ್ಟು ಕಿವುಡುತನ ಇರುವವರಿಗೆ ಉಚಿತವಾಗಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಶ್ರವಣಯಂತ್ರಗಳನ್ನು ಅಳವಡಿಸಲಾಗುತ್ತದೆ ಎಂದೂ ಹೇಳಿದರು.

ದಕ್ಷಿಣ ಕನ್ನಡದಲ್ಲಿ 10, ಉಡುಪಿಯಲ್ಲಿ 6
ಮಂಗಳೂರು/ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಒಟ್ಟು 16 ನಮ್ಮ ಕ್ಲಿನಿಕ್‌ಗಳಿಗೆ ಬುಧವಾರ ಚಾಲನೆ ನೀಡಲಾಯಿತು. ಮೊದಲ ಹಂತದಲ್ಲಿ ಉಡುಪಿಯಲ್ಲಿ 3, ಕುಂದಾಪುರದಲ್ಲಿ 2 ಹಾಗೂ ಕಾರ್ಕಳದಲ್ಲಿ 1 ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಿದೆ.

Advertisement

ದ.ಕ.ದಲ್ಲಿ ಪಾಲಿಕೆ ವ್ಯಾಪ್ತಿಯ ಸೂಟರ್‌ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್‌, ಮೀನಕಳಿಯ, ಸುಳ್ಯದ ದುಗ್ಗಲಡ್ಕ, ಮೂಡುಬಿದಿರೆಯ ಗಂಟಾಲಕಟ್ಟೆ, ಉಳ್ಳಾಲದ ಕೆರೆಬೈಲು ಹಾಗೂ ಕಡಬದ ಕೋಡಿಂಬಾಳದಲ್ಲಿ ನಮ್ಮ ಕ್ಲಿನಿಕ್‌ ಆರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next