Advertisement

ರಾಜ್ಯದ 113 ಅಮರನಾಥ ಯಾತ್ರಿಕರು ಸುರಕ್ಷಿತ 

05:11 PM Jul 07, 2018 | |

ಹುಬ್ಬಳ್ಳಿ: ಅಮರನಾಥ ಯಾತ್ರೆಗೆಂದು ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇನ್ನಿತರೆ ಭಾಗಗಳಿಂದ ತೆರಳಿದ್ದ ಎಲ್ಲ 113 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದು, ಶುಕ್ರವಾರ ಎಲ್ಲರೂ ಪಹಲ್ಗಾಮ್‌ಗೆ ಬಂದು ಸೇರಿಕೊಂಡಿದ್ದಾರೆ. ಖಾಸಗಿ ಟ್ರಾವೆಲ್ಸ್‌ ಸಂಸ್ಥೆಯಿಂದ ಆಯೋಜಿಸಿದ್ದ ಅಮರನಾಥ ಯಾತ್ರೆಗೆ ಹುಬ್ಬಳ್ಳಿ-ಧಾರವಾಡ, ಬ್ಯಾಡಗಿ, ಸಂಶಿ, ಗದಗ, ದಾವಣಗೆರೆ, ಸುರೇಬಾನ, ಲಕ್ಷ್ಮೇಶ್ವರ, ಚಿತ್ರದುರ್ಗ, ಮುಂಡಗೋಡ, ಕೊಪ್ಪಳ, ವಿಜಯಪುರ ಸೇರಿದಂತೆ ಇನ್ನಿತರೆ ಭಾಗಗಳಿಂದ ಸುಮಾರು 113 ಯಾತ್ರಾರ್ಥಿಗಳು ಜೂ.26ರಂದು ಹುಬ್ಬಳ್ಳಿಯಿಂದ ತೆರಳಿದ್ದರು. ಇವರಲ್ಲಿ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ 3, ಕೇಶ್ವಾಪುರದ 9, ಉಣಕಲ್ಲದ 6, ಗಾಮನಗಟ್ಟಿಯ 6, ಹಳೇಹುಬ್ಬಳ್ಳಿಯ 5, ಬಮ್ಮಾಪುರದ ಒಬ್ಬರು ಸೇರಿ 31 ಜನರು ಹಾಗೂ ಧಾರವಾಡ ತಾಲೂಕಿನ 10, ಕುಂದಗೋಳ ತಾಲೂಕಿನ 6 ಸೇರಿ ಧಾರವಾಡ ಜಿಲ್ಲೆಯಿಂದ ಒಟ್ಟು 46 ಜನರು ಹಾಗೂ ಇನ್ನುಳಿದ ಜಿಲ್ಲೆಗಳಿಂದ 67 ಯಾತ್ರಾರ್ಥಿಗಳು ಇದ್ದಾರೆ. ಇವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

Advertisement

ಬಾಲ್ತಾಲ್‌ನಲ್ಲಿ ಸುರಕ್ಷಿತವಾಗಿದ್ದ 58 ಯಾತ್ರಾರ್ಥಿಗಳೆಲ್ಲ ಶುಕ್ರವಾರ ಬೆಳಗ್ಗೆ ಬಸ್‌ ಮೂಲಕ ಪಹಲ್ಗಾಮ್‌ಗೆ ತೆರಳಿದೆವು. ಗುಫಾದಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿದ್ದವರು ಕೂಡ ಶುಕ್ರವಾರ ನಮ್ಮನ್ನು ಕೂಡಿಕೊಂಡಿದ್ದಾರೆ. ಎಲ್ಲ 113 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದೇವೆ. ಶನಿವಾರ ಬೆಳಗ್ಗೆ ವೈಷ್ಣೋದೇವಿಗೆ ತೆರಳಲಿದ್ದೇವೆ ಎಂದು ನವನಗರದ ನಿವಾಸಿ ರಾಘವೇಂದ್ರ ಶಿರಹಟ್ಟಿ ‘ಉದಯವಾಣಿ’ಗೆ ತಿಳಿಸಿದ್ದಾರೆ. ಗುಫಾದಲ್ಲಿ ಸಿಲುಕಿದ್ದ 3-4 ಯಾತ್ರಾರ್ಥಿಗಳು ಹೆಲಿಕಾಪ್ಟರ್‌ ಮೂಲಕ ಬಾಲ್ತಾಲ್‌ ಬಳಿಯ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ನಂತರ ಅವರು ಕೂಡ ಕಾರಿನಲ್ಲಿ ಪಹಲ್ಗಾಮ್‌ಗೆ ಆಗಮಿಸಿದರು. ಹುಬ್ಬಳ್ಳಿಯಿಂದ ಅಮರನಾಥ ಯಾತ್ರೆಗೆ ಆಗಮಿಸಿದ್ದ ಎಲ್ಲ 113 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಟ್ರಾವೆಲ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುನೀಲ ತೊಗರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next