Advertisement

ಕೈಲಾಸ ನಗರದ 112 ಮನೆಗಳು ಸಂಪೂರ್ಣ ಕತ್ತಲಲ್ಲಿ 

02:40 PM Aug 12, 2018 | |

ವಾಡಿ: ಇಂಗಳಗಿ ಗ್ರಾಪಂ ವ್ಯಾಪ್ತಿಯಿಂದ ಸ್ಥಳಾಂತರಗೊಂಡು, ವಾಡಿ-ರಾವೂರ ಮಧ್ಯೆ ಕೈಲಾಸ ನಗರವಾಗಿ ನಿರ್ಮಾಣವಾಗಿರುವ ಕ್ವಾರಿ ತಾಂಡಾದ 112 ಮನೆಗಳು ಅಕ್ಷರಶಃ ಕತ್ತಲಲ್ಲಿ ಮುಳುಗಿವೆ. ಗಣಿಗಾರಿಕೆ ನಡೆಸುವ ಸಂಬಂದ ಇಂಗಳಗಿ ಕ್ವಾರಿ ತಾಂಡಾವನ್ನು ಸಂಪೂರ್ಣ ಸ್ಥಳಾಂತರಗೊಳಿಸಿದ ಎಸಿಸಿ ಕಂಪನಿ, 112 ಮನೆಗಳನ್ನು ನಿರ್ಮಿಸಿಕೊಟ್ಟು, ಕಳೆದ ಹತ್ತು ವರ್ಷಗಳಿಂದ ಉಚಿತ ಕುಡಿಯುವ ನೀರು ಹಾಗೂ ಉಚಿತ ವಿದ್ಯುತ್‌ ಸೌಕರ್ಯ ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಏಕಾಏಕಿ ಈ ಕೈಲಾಸ ನಗರ ಬಡಾವಣೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದ್ದು, ಬಡಾವಣೆ ನಿವಾಸಿಗಳು ಗೋಳಾಡುವಂತಾಗಿದೆ.

Advertisement

ಶನಿವಾರ ಸ್ಥಳೀಯ ಎಸಿಸಿ ಆಡಳಿತ ಕಚೇರಿಗೆ ಆಗಮಿಸಿದ ಕೈಲಾಸ ನಗರದ ನೂರಾರು ಜನರು, ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಮೆಂಟ್‌ ಉತ್ಪಾದನೆಗಾಗಿ ಗಣಿಗಾರಿಕೆ ನಡೆಸಲು ನಮ್ಮ ತಾಂಡಾ ಸ್ಥಳಾಂತರಗೊಳಿಸಿದ ಎಸಿಸಿ ಕಂಪನಿ ಅ ಧಿಕಾರಿಗಳು, 112 ಮನೆಗಳನ್ನು ನಿರ್ಮಿಸಿಕೊಟ್ಟು ವಿದ್ಯುತ್‌ ಹಾಗೂ ಟ್ಯಾಂಕರ್‌ ಗಳ ಮೂಲಕ ಕುಡಿಯಲು ನೀರು ಒದಗಿಸುತ್ತಿದ್ದಾರೆ. ಹೊಸ ಬಡಾವಣೆಯಾಗಿ ಹತ್ತು ವರ್ಷ ಕಳೆದರೂ ಪೈಪ್‌ ಲೈನ್‌ ಅಳವಡಿಸಿಲ್ಲ. ವೈಯಕ್ತಿಕ ಶೌಚಾಲಯಗಳಿಗೆ ನೀರಿಲ್ಲ. ಬಯಲು ಶೌಚಾಲಯ ಬಳಕೆ ಅನಿವಾರ್ಯವಾಗಿದೆ. ರಸ್ತೆ ಸೌಲಭ್ಯ ಇಲ್ಲ. ಎಸಿಸಿಯವರು ಜೆಸ್ಕಾಂ ಇಲಾಖೆಗೆ ವಿದ್ಯುತ್‌ ದರ ಪಾವತಿ ಮಾಡದ ಕಾರಣ ಇಡೀ ಕೈಲಾಸ ನಗರದ ವಿದ್ಯುತ್‌ ಕಡಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಎಸಿಸಿ ಎಚ್‌ಆರ್‌ ವಿಭಾಗದ ಮುಖ್ಯಸ್ಥ ಪುಷ್ಕರ್‌ ಚೌಧರಿ ಅವರನ್ನು ಭೇಟಿ ಮಾಡಿ ದೂರು ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೈಲಾಸ ನಗರದ ಮುಖಂಡರು, ಇಂಗಳಗಿ ಗ್ರಾಪಂ ವ್ಯಾಪ್ತಿಯ ಸಂಪರ್ಕ ಕಡಿತಗೊಂಡಿದೆ. ಕೈಲಾಸ ನಗರವನ್ನು ರಾವೂರ ಗ್ರಾಪಂಗೆ ಅಥವಾ ವಾಡಿ ಪುರಸಭೆಗೆ ಸೇರ್ಪಡೆ ಮಾಡಿದರೆ ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಳಲು ತೋಡಿಕೊಂಡರು. ಬಡಾವಣೆಯ ಶಂಕರ ಚವ್ಹಾಣ, ಅಶೋಕ ರಾಠೊಡ, ಸುರೇಶ ಚವ್ಹಾಣ, ಪ್ರಕಾಶ ರಾಠೊಡ, ಬಲರಾಮ ರಾಠೊಡ, ಥಾವರೂ ಚವ್ಹಾಣ, ಅಶೋಕ ಎಲ್‌.ರಾಠೊಡ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next