ಮಲಪ್ಪುರಂ (ಕೇರಳ): ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತು ಸೋಂಕಿತರ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಆತಂಕದ ನಡುವೆ ನೆರೆ ರಾಜ್ಯ ಕೇರಳದಲ್ಲಿ ಉತ್ತಮ ಬೆಳವಣಿಗೆಯೊಂದು ವರದಿಯಾಗಿದೆ. ಸೋಂಕು ದೃಢವಾಗಿ ಆಸ್ಪತ್ರೆ ಸೇರಿದ್ದ 110 ವರ್ಷ ವಯಸ್ಸಿನ ಅಜ್ಜಿಯೋರ್ವರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಈ ಮಾಹಿತಿ ನೀಡಿದ್ದು, ರಂದಾಥಾನಿ ವರಿಯತ್ ಪಾತು ಎಂಬ 110 ವರ್ಷ ಪ್ರಾಯದ ಮಲಪ್ಪುರಂ ಜಿಲ್ಲೆಯ ಮಹಿಳೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದಿದ್ದಾರೆ.
ಈ ಅಜ್ಜಿ ಆ. 18ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲಾ ಚಿಕಿತ್ಸೆಗೆ ಸಮರ್ಪಕವಾಗಿ ಸ್ಪಂದಿಸಿದ್ದ ಇವರು ಕೋವಿಡ್ ಗೆದ್ದಿದ್ದಾರೆ. ವರಿಯತ್ ಪಾತು ಅವರ ಪುತ್ರಿಗೆ ಈ ಹಿಂದೆ ಸೋಂಕು ದೃಢವಾಗಿತ್ತು. ಹೀಗಾಗಿ ಇವರಿಗೂ ಸೋಂಕು ತಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಜನಾರ್ಧನ ರೆಡ್ಡಿಗೆ ಕೋವಿಡ್ ಸೋಂಕು ದೃಢ: ಬಳ್ಳಾರಿ ಕಾರ್ಯಕ್ರಮ ರದ್ದುಪಡಿಸಿದ ರೆಡ್ಡಿ
ಕೋವಿಡ್ ಸೋಂಕಿನಿಂದ ಗುಣಮುಖರಾದ ಕೇರಳ ರಾಜ್ಯದ ಅತೀ ಹಿರಿಯ ಮಹಿಳೆ ಇವರಾಗಿದ್ದಾರೆ. ಹಿರಿಯ ಮಹಿಳೆಗೆ ಉತ್ತಮ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸಚಿವೆ ಶೈಲಜಾ ಟೀಚರ್ ಅಭಿನಂದನೆ ತಿಳಿಸಿದ್ದಾರೆ.