ಲಕ್ನೋ: ನಿಲ್ಲಿಸಿದ್ದ ಬಸ್ ಗೆ ಟ್ರಕ್ ವೊಂದು ಢಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಶನಿವಾರ(ಮೇ.25 ರಂದು) ರಾತ್ರಿ ನಡೆದಿದೆ.
ಬಸ್‌ನಲ್ಲಿದ್ದ ಜನ ಸೀತಾಪುರದಿಂದ ಪೂರ್ಣಗಿರಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಬಸ್ ಶಹಜಾನ್‌ಪುರದ ಡಾಬಾದ ಬಳಿ ನಿಂತಿತ್ತು. ಇದೇ ದಾರಿಯಲ್ಲಿ ಬರುತ್ತಿದ್ದ ಕಲ್ಲು ತುಂಬಿದ್ದ ಟ್ರಕ್ ನಿಂತಿದ್ದ ಬಸ್ ಗೆ ಢಿಕ್ಕಿ ಹೊಡೆದು, ಬಸ್ಸಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ 11 ಮಂದಿ ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹಿಳೆಯರು ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ಮೃಪಟ್ಟಿದ್ದು, 10 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಟ್ರಕ್ ಅಡಿಯಲ್ಲಿದ್ದ ದೇಹಗಳನ್ನು ಹೊರತೆಗೆಯಲಾಯಿತು.
ರಾತ್ರಿ 11.30 ರ ಸುಮಾರಿಗೆ ಗೋಲಾ ಬೈಪಾಸ್ ರಸ್ತೆಯಲ್ಲಿ ಕಲ್ಲು ತುಂಬಿದ ಟ್ರಕ್ ಢಾಬಾ ಬಳಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅದರ ಮೇಲೆ ಪಲ್ಟಿಯಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಕೆಲವರು ಢಾಬಾದಲ್ಲಿ ಊಟ ಮಾಡುತ್ತಿದ್ದರು ಮತ್ತು ಇತರರು ಬಸ್‌ನೊಳಗೆ ಕುಳಿತಿದ್ದರು. 11 ಮಂದಿ ಮೃತಪಟ್ಟಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ನಾವು ಎಲ್ಲಾ ದೇಹಗಳನ್ನು ಹೊರತೆಗೆದು ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಶಹಜಹಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ʼಇಂಡಿಯಾ ಟುಡೇʼಗೆ ತಿಳಿಸಿದ್ದಾರೆ.
ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.