Advertisement

11 ಕೆ.ವಿ. ಕೊಲ್ಲಿ , ಪದ್ಮುಂಜ ನೂತನ ವಿದ್ಯುತ್‌ ಉಪಕೇಂದ್ರ ಶೀಘ್ರ 

12:45 PM Jul 29, 2020 | mahesh |

ಬೆಳ್ತಂಗಡಿ: ಹಾಲಿ ಬೆಳ್ತಂಗಡಿ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಂಗಾಡಿ ಫೀಡರ್‌ ಹೊರೆ ನಿವಾರಿಸಲು 11 ಕೆ.ವಿ. ಕೊಲ್ಲಿ ಫೀಡರ್‌ ಹಾಗೂ 110/11 ಕೆ.ವಿ. ಕರಾಯ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಂದಾರು ಫೀಡರ್‌ ಹೊರೆ ನಿವಾರಿಸಲು 11 ಕೆ.ವಿ. ಪದ್ಮುಂಜ ನೂತನ ವಿದ್ಯುತ್‌ ಉಪಕೇಂದ್ರಗಳ (ಫೀಡರ್‌) ಸ್ಥಾಪನೆಗೆ ಹಸುರು ನಿಶಾನೆ ದೊರೆತಿದೆ.

Advertisement

ಬಂದಾರು ಹಾಗೂ ಬಂಗಾಡಿ 11 ಕೆ.ವಿ. ಉಪಕೇಂದ್ರದಲ್ಲಿ ಹೆಚ್ಚು ವಿದ್ಯುತ್‌ ಒತ್ತಡದಿಂದ ಕೃಷಿ, ಗೃಹಬಳಕೆ ಸಹಿತ ಇನ್ನಿತರ ಬಳಕೆಗೆ ಅಡಚಣೆ ಎದುರಾಗಿತ್ತು. ಈ ಕುರಿತಂತೆ ನೂತನ ಉಪಕೇಂದ್ರ ಸ್ಥಾಪಿಸಲು ಶಾಸಕ ಹರೀಶ್‌ ಪೂಂಜ ಅವರಿಗೆ ಹಲವೆ ಡೆಗಳಿಂದ ಬೇಡಿಕೆಗಳು ಬಂದಿದ್ದವು. ಈ ಕುರಿತು ಶಾಸಕರು ನೀಡಿದ್ದ ಭರವಸೆಯಂತೆ ಪ್ರಸಕ್ತ 68 ಲಕ್ಷ ರೂ. ವೆಚ್ಚದಲ್ಲಿ 11 ಕೆ.ವಿ. ಕೊಲ್ಲಿ ಹಾಗೂ 54 ಲಕ್ಷ ರೂ. ವೆಚ್ಚದಲ್ಲಿ ಪದ್ಮುಂಜ ಸಹಿತ ಒಟ್ಟು 1.22 ಕೋ. ರೂ. ವೆಚ್ಚದಲ್ಲಿ ನೂತನ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ.

ಒತ್ತಡ ನಿವಾರಣೆ
ಒಂದು ವಿದ್ಯುತ್‌ ಉಪಕೇಂದ್ರದಿಂದ ಗರಿಷ್ಠ 70ರಿಂದ 80 ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌) ಅಳವಡಿಸಬಹುದಾಗಿದೆ. ಆದರೆ ಪ್ರಸಕ್ತ 100ರಿಂದ 150 ಪರಿವರ್ತಗಳನ್ನು ಅಳವಡಿಸಿರುವುದರಿಂದ ಇರುವ ಉಪಕೇಂದ್ರಗಳಿಗೆ ಹೆಚ್ಚಿನ ಹೊರೆಯಾಗಿತ್ತು. ಇದೀಗ ಕೊಲ್ಲಿಯಲ್ಲಿ ನೂತನ ಫೀಡರ್‌ ಅಳ ವಡಿಕೆಯಾದಲ್ಲಿ 60ರಿಂದ 70 ಪರಿವರ್ತಕಗಳು ವಿಭಜನೆಯಾಗಲಿವೆ. ಬಂಗಾಡಿ ಫೀಡರ್‌ನಿಂದ ಕೊಲ್ಲಿ ನೂತನ ಫೀಡರ್‌ ವಿಭಜನೆಗೊಂಡಲ್ಲಿ ಲಾೖಲ, ನಡ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ ಗ್ರಾಮದ ಸುತ್ತಮುತ್ತ ವಿದ್ಯುತ್‌ ಬಳಕೆದಾರರಿಗೆ ಸಮರ್ಪಕ ವಿದ್ಯುತ್‌ ಸರಬರಾಜು ಆಗಲಿದ್ದು, ವಿದ್ಯುತ್‌ ಅಭಾವ ನೀಗಲಿದೆ.

ಪದ್ಮುಂಜ ಫೀಡರ್‌ ಬಹುವರ್ಷಗಳ ಬೇಡಿಕೆ
ಹಾಲಿ ಬಂದಾರು ಫೀಡರ್‌ನಿಂದ ಪದ್ಮುಂಜ ನೂತನ ಫೀಡರ್‌ ವಿಭಜನೆಗೊಂಡಲ್ಲಿ ಉರುವಾಲು, ಕಣಿಯೂರು, ಬಂದಾರು, ಮೊಗ್ರು ಸಹಿತ ಸುತ್ತಮುತ್ತಲ ವಿದ್ಯುತ್‌ ಬಳಕೆದಾರರಿಗೆ ಪ್ರಯೋಜನವಾಗಲಿದೆ. ಕೃಷಿ ಸಂಬಂಧಿಸಿ ಬೇಸಗೆಯಲ್ಲಿ ಅತಿ ಹೆಚ್ಚು ಪಂಪ್‌ಸೆಟ್‌ ಬಳಕೆದಾರರು ಈ ಪ್ರದೇಶದಲ್ಲಿರುವುದರಿಂದ ಬಹು ಬೇಡಿಕೆಯ ಯೋಜನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬಂದಂತಾಗಲಿದೆ.

11 ಕೆ.ವಿ. ಕೊಲ್ಲಿ, ಪದ್ಮುಂಜ ನೂತನ ಎರಡು ಉಪಕೇಂದ್ರಗಳ ಸ್ಥಾಪನೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಾಸಕರ ಬಿಡುವಿನ ಅವಧಿಯಲ್ಲಿ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸಬ್‌ಸ್ಟೇಷನ್‌ಗೆ ಬೇಡಿಕೆ
ಬೆಳ್ತಂಗಡಿ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಫೀಡರ್‌ಗಳಿವೆ. ಎಲ್ಲ ಸ್ಟೇಷನ್‌ಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಜಿರೆ ಮತ್ತು ಕಲ್ಮಂಜದಲ್ಲಿ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಹಲವು ವರ್ಷಗಳ ಬೇಡಿಕೆ ಇದೆ. ಈಗಾಗಲೇ ಇಲಾಖೆಯಿಂದ ಸ್ಥಳ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ ಗಮನಹರಿಸಿದಲ್ಲಿ ಶೀಘ್ರ ಸಬ್‌ಸ್ಟೇಷನ್‌ ನಿರ್ಮಾಣ ಸಾಧ್ಯವಾಗಲಿದೆ.

ಟೆಂಡರ್‌ ಪ್ರಕ್ರಿಯೆ ಪೂರ್ಣ
ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕೊಲ್ಲಿ ಮತ್ತು ಪದ್ಮುಂಜ ಫೀಡರ್‌ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ತಾಲೂಕಿನಲ್ಲಿ ವಿದ್ಯುತ್‌ ಶಕ್ತಿಯ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಮುಂದೆ ಮತ್ತಷ್ಟು ಕಾರ್ಯ ಯೋಜನೆ ರೂಪಿಸಲಾಗುವುದು.
– ಹರೀಶ್‌ ಪೂಂಜ, ಶಾಸಕ

11 ಕೆ.ವಿ. ಕೊಲ್ಲಿ ಫೀಡರ್‌68 ಲಕ್ಷ ರೂ. ವೆಚ್ಚ
11 ಕೆ.ವಿ. ಪದ್ಮುಂಜ ಫೀಡರ್‌54 ಲಕ್ಷ ರೂ. ವೆಚ್ಚ
ಯೋಜನೆಗೆ ಒಟ್ಟು 1.22 ಕೋ. ರೂ. ವೆಚ್ಚ
60ರಿಂದ 70 ಪರಿವರ್ತಕಗಳು ವಿಭಜನೆ ಸಾಧ್ಯತೆ
ಕೃಷಿಕರಿಗೆ, ಹೆಚ್ಚು ವಿದ್ಯುತ್‌ ಬಳಕೆದಾರರಿಗೆ ಪ್ರಯೋಜನ
ಸಮರ್ಪಕ ವಿದ್ಯುತ್‌ ಸರಬರಾಜು ಆಗಿ ಸಮಸ್ಯೆ ನೀಗುವ ನಿರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next