ಸಿಕಂದರಾಬಾದ್: ಮರದ ಗೋದಾಮಿನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ ಪರಿಣಾಮ ಕನಿಷ್ಠ 11 ಮಂದಿ ವಲಸೆ ಕಾರ್ಮಿಕರು ಸಜೀವವಾಗಿ ಸುಟ್ಟುಹೋಗಿರುವ ಭೀಕರ ಘಟನೆ ಬುಧವಾರ (ಮಾರ್ಚ್ 23) ನಸುಕಿನ ವೇಳೆ ತೆಲಂಗಾಣದ ಸಿಕಂದರಾಬಾದ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಉಡುಪಿ: ಮಾ. 28ರಿಂದ ಎ. 11: ಎಸೆಸೆಲ್ಸಿ ಪರೀಕ್ಷೆ : ಪರೀಕ್ಷಾ ಪಾವಿತ್ರ್ಯ ಕಾಪಾಡಿ: ಡಿಸಿ
ಇಂದು ಮುಂಜಾನೆ 4ಗಂಟೆ ವೇಳೆಗೆ ಮರದ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಒಣಗಿದ ಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಗೋದಾಮಿನೊಳಗೆ ಮಲಗಿದ್ದು, ಬೆಂಕಿಯ ಕೆನ್ನಾಲಗೆ ಸಿಲುಕಿ 11 ಮಂದಿ ಜೀವಂತವಾಗಿ ದಹನವಾಗಿರುವುದಾಗಿ ವರದಿ ವಿವರಿಸಿದೆ.
ಈ ಸಂದರ್ಭದಲ್ಲಿ 4-5 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಸಾವನ್ನಪ್ಪಿರುವ ವಲಸೆ ಕಾರ್ಮಿಕರು ಬಿಹಾರ ಮೂಲದವರಾಗಿದ್ದಾರೆ ಎಂದು ವರದಿ ಹೇಳಿದೆ.
ಬೆಂಕಿ ಸಮೀಪದಲ್ಲೇ ಇದ್ದ ಗುಜರಿ ಗೋದಾಮನ್ನೂ ಆವರಿಸಿಕೊಂಡಿದ್ದು, ಅಗ್ನಿಶಾಮಕದಳ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.