ಬೆಂಗಳೂರು: ರಾಜ್ಯದ ಎಂಟು ಹೊಟೇಲ್ ಯೋಜನೆಗಳಿಗೆ ಸಹಾಯಧನ ಬಿಡುಗಡೆ ಮಾಡಲು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಅವರ ಅಧ್ಯಕ್ಷತೆಯ ಅಧಿಕಾರಯುಕ್ತ ಸಮಿತಿಯು ಅನುಮೋದನೆ ನೀಡಿದೆ. ಆದರೆ ಆ ಎಂಟು ಹೋಟೆಲ್‌ಗಳ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.
ಸಮಿತಿಯು ಸ್ವೀಕೃತವಾಗಿರುವ 19 ಪ್ರಸ್ತಾವನೆಗಳನ್ನು ಪರಿಶೀಲಿಸಿದ್ದು, ಈ ಪೈಕಿ ಅರ್ಹತೆ ಹೊಂದಿರುವ ಹಾಗೂ ಅನುಮೋದನೆ ನೀಡಬಹುದಾಗಿರುವ 8 ಹೊಟೇಲ್ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲು ಸಮಿತಿ ಅನುಮತಿ ನೀಡಿದೆ.
ಉಳಿದಂತೆ ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಾರಂಭಿಸಿರುವ ಏಳು ಹೊಟೇಲ್ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಆದರೆ ಇನ್ನೂ ಕಾಮಗಾರಿ ಪ್ರಾರಂಭಿಸದಿರುವ ನಾಲ್ಕು ಹೊಟೇಲ್ ಯೋಜನೆಗಳ ಬಗ್ಗೆ ಮತ್ತೂಮ್ಮೆ ಸ್ಥಳ ಪರಿಶೀಲನೆ ವರದಿಯನ್ನು ಪಡೆದು ಮುಂದಿನ ಸಭೆಯಲ್ಲಿ ಅನುಮೋದನೆ ನೀಡುವ ಬಗ್ಗೆ ಪರಿಶೀಲಿಸಲು ತೀರ್ಮಾನಿಸಿದೆ. ಸಹಾಯಧನ ಬಯಸಿ ಸಲ್ಲಿಸಲಾಗಿರುವ ಈ ಹನ್ನೊಂದು ಪ್ರಸ್ತಾವನೆಗಳ ವಿವರಗಳನ್ನೂ ಸಮಿತಿ ಬಹಿರಂಗಗೊಳಿಸಿಲ್ಲ.
ಈಗಾಗಲೇ ಸಮಿತಿಯಲ್ಲಿ ತಾತ್ವಿಕ ಅನುಮೋದನೆ ನೀಡಿರುವ 8 ಯೋಜನೆಗಳ ಅಂದಾಜು ಮೊತ್ತ 81.72 ಕೋಟಿ ರೂ. ಗಳಾಗಿದ್ದು, ಇವುಗಳ ಅರ್ಹ ಯೋಜನಾ ಮೊತ್ತ 70.33 ಕೋಟಿ ರೂ ಗಳಾಗಿದೆ. ಇವುಗಳ ತಾತ್ಕಾಲಿಕ ಸಹಾಯಧನದ ಮೊತ್ತ 11.97 ಕೋಟಿ ರೂ ಗಳಾಗಿದೆ. ಈ ಸಹಾಯಧನದ ಮೊತ್ತವನ್ನು ಯೋಜನೆಗಳು ಪೂರ್ಣಗೊಂಡ ಬಳಿಕ ಹೂಡಿಕೆದಾರರಿಗೆ ಬಿಡುಗಡೆ ಮಾಡಲಾಗುತ್ತದೆ.
ಒಟ್ಟು 19 ಪ್ರಸ್ತಾವನೆಗಳ ಅಂದಾಜು ಮೊತ್ತ 266.06 ಕೋಟಿ ರೂ.ಗಳಾಗಿದ್ದು ತಾತ್ಕಾಲಿಕ ಅರ್ಹಯೋಜನಾ ಮೊತ್ತ ರೂ.223.52 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ 19 ಹೊಟೇಲ್ ನಿರ್ಮಾಣದಿಂದ 1,495 ಉದ್ಯೋಗಗಳು ಸೃಷ್ಟಿಯಾಗಲಿವೆ.
ಈಗಾಗಲೇ ಜಾರಿಯಲ್ಲಿರುವ ಪ್ರವಾಸೋದ್ಯಮ ನೀತಿಯ ಕೆಲವು ನಿಯಮಗಳನ್ನು ಪರಿಷ್ಕರಿಸುವ ಅಗತ್ಯವಿದ್ದು, ತುರ್ತಾಗಿ ಈ ಬಗ್ಗೆ ಸಭೆ ಕರೆಯಲು ಇಲಾಖೆಯ ಅಧಿಕಾರಿಗಳಿಗೆ ಸಮಿತಿ ಸೂಚಿಸಿದೆ.