ಕಲಘಟಗಿ: ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಮಾ. 28ರಿಂದ ಏ. 11ರ ವರೆಗೆ ತಾಲೂಕಿನಲ್ಲಿ 3 ಕ್ಲಸ್ಟರ್ ಸಹಿತ ಹಾಗೂ 6 ಕ್ಲಸ್ಟರ್ ರಹಿತ ಒಟ್ಟೂ 9 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ 2670 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ತಾಲೂಕಿನಿಂದ 1397 ಬಾಲಕರು ಹಾಗೂ 1378 ಬಾಲಕಿಯರು ಒಟ್ಟೂ 2775 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಅವರಲ್ಲಿನ 105 ಬಾಹ್ಯ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರ ಸ್ಥಳದಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ತಾಲೂಕಿನಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಾಮಾಜಿಕ ಅಂತರದೊಂದಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ಬಳಕೆಯ ಸುರಕ್ಷತಾ ಕ್ರಮದೊಂದಿಗೆ ಆರಂಭಿಸಲಾಗುವುದು. ಪಟ್ಟಣ ವ್ಯಾಪ್ತಿಯ ಜನತಾ ಇಂಗ್ಲಿಷ್ ಸ್ಕೂಲ್, ಬಾಲಕಿಯರ ಸರಕಾರಿ ಪ್ರೌಢಶಾಲೆ ಹಾಗೂ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕ್ಲಸ್ಟರ್ ಸಹಿತ ಪರೀಕ್ಷಾ ಕೇಂದ್ರಗಳನ್ನಾಗಿಸಿದ್ದು, ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಮ್ಮಿಗಟ್ಟಿ, ಗುರುದೇವ ಪ್ರೌಢಶಾಲೆ ತಬಕದಹೊನ್ನಿಹಳ್ಳಿ, ಶ್ರೀ ಶಿವಪ್ಪಣ್ಣ ಜಿಗಳೂರ ಪ್ರೌಢಶಾಲೆ ಮಿಶ್ರಿಕೋಟಿ, ಸಾಯಿ ಇಂಟರ್‌ನ್ಯಾಶನಲ್ ಆಂಗ್ಲ ಮಾಧ್ಯಮ ಸ್ಕೂಲ್ ಕಾಡನಕೊಪ್ಪ, ಸಂತ್ ಝೇವಿಯರ್ಸ್ ಪ್ರೌಢಶಾಲೆ ತುಮ್ರಿಕೊಪ್ಪ ಹಾಗೂ ಶ್ರೀಮತಿ ಶಿವರಾಜದೇವಿ ಪ್ರೌಢಶಾಲೆ ಗಳಗಿಹುಲಕೊಪ್ಪ ಈ 6 ಕೇಂದ್ರಗಳನ್ನು ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರಗಳನ್ನಾಗಿಸಲಾಗಿದೆ.
ಪರೀಕ್ಷಾ ಪೂರ್ವ ಸಿದ್ಧತೆಗಳೆಲ್ಲವನ್ನೂ ಈಗಾಗಲೇ ಪೂರ್ಣಗೊಳಿಸಲಾಗಿದೆ. ಶಿಕ್ಷಣ, ಸಾರಿಗೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯವರ ಜೊತೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಿರ್ಭಿಡೆಯಿಂದ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ತಿಳಿಸಿದ್ದಾರೆ.