ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಡೆಂಗ್ಯೂ ಪ್ರಕರಣಗಳೂ ಹೆಚ್ಚಾಗುತ್ತಿವೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಸೆಪ್ಟಂಬರ್ 6 ರ ವರೆಗೆ ರಾಜ್ಯದಲ್ಲಿ 10847 ಡೆಂಗ್ಯೂಪ್ರಕರಣಗಳು ಖಾತ್ರಿಯಾಗಿದ್ದು, 1588 ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ.
ಮನೆಗಳ ಸುತ್ತ ಮುತ್ತ ಮಳೆ ನೀರಿನ ಸಂಗ್ರಹವಾಗುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗುತ್ತಿವೆ. ಸಿಮೆಂಟ್ ತೊಟ್ಟಿ, ಪ್ಲಾಸ್ಟಿಕ್ ಡ್ರಮ್, ಟೈರ್‌ಗಳು, ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹವಾಗುವುದರಿಂದ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿಹಾಗೂ ಚಿಕನ್ ಗುನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗ್ಯೂ ಮತ್ತು ಚಿಕನ್ ಗುನ್ಯಾ ತಡೆಯಲು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಆರೋಗ್ಯ ಸಿಬ್ಬಂದಿ ತಮ್ಮೊಂದಿಗೆ ಟೆಮಿಪಾಸ್ ಲಾರ್ವಾ ನಾಶಕ ದ್ರಾವಣವನ್ನು ತಮ್ಮೊಂದಿಗೆ ಇಟ್ಟುಕೊಂಡು ಈಡೀಸ್ ಸೊಳ್ಳೆ ಕಂಡು ಬಂದ ಸ್ಥಳಗಳಲ್ಲಿ ಸಿಂಪರಣೆ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ 104 ಸಹಾಯವಾಣಿ ತೆರೆದಿದ್ದು, ಸರ್ಕಾರಿ ಅಥವಾ ಖಾಸಗಿ ಕಟ್ಟಡಗಳಲ್ಲಿ, ಸಿನೆಮಾ ಮಂದಿರ, ಶಾಲಾ ಕಾಲೇಜು, ವಾಣಿಜ್ಯ ಸಂಕೀರ್ಣಗಳಲ್ಲಿ ಈಡೀಸ್ ಸೊಳ್ಳೆಯ ತಾಣಗಳು ಕಂಡು ಬಂದಲ್ಲಿ ಸಾರ್ವಜನಿಕರು 104 ಸಹಾಯವಾಣಿಗೆ ಕರೆ ಮಾಡಿದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುತ್ತಾರೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಡೆಂಗಿ ನಿಯಂತ್ರಣಕ್ಕಾಗಿ ಪುರುಷ ಸ್ವಯಂ ಸೇವಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ನಿರಂತರವಾಗಿ ಹೆಚ್ಚುತ್ತಿರುವ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರಿ ಹಾಗೂ ಖಾಸಗಿ ವೈದ್ಯರಿಗೆ ಎರಡು ದಿನಗಳ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದ ವೈದ್ಯರು ಇತರ ವೈದ್ಯರಿಗೆ ತರಬೇತಿ ನೀಡಿ, ಡೆಂಗಿ ಹಾಗೂ ಚಿಕನ್ ಗುನ್ಯಾ ನಿಯಂತ್ರಣಕ್ಕೆ ಶ್ರಮಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.