ಕುಷ್ಟಗಿ: ಸಕಾಲಕ್ಕೆ 108 ಅ್ಯಂಬ್ಯುಲೆನ್ಸ್ ವಾಹನ ಬಾರದ ಹಿನ್ನೆಲೆಯಲ್ಲಿ ಗರ್ಭಿಣಿ ಟಂಟಂ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ತಾಲೂಕಿನ ಟೆಂಗುಂಟಿ ಗ್ರಾಮದ ಅಯ್ಯಮ್ಮ ಹನಮಂತ ಜೇನರ್ ಎಂಬ ತುಂಬು ಗರ್ಭಿಣಿಗೆ ಹೆರಿಗೆ ಬೇನೆ ಕಾಣಿಸಿಕೊಂಡಿದೆ. ಕೂಡಲೇ 108 ಅ್ಯಂಬ್ಯುಲೆನ್ಸ್ ವಾಹನ ಸಂಪರ್ಕಿಸಿದರೂ ಸಕಾಲಕ್ಕೆ ವಾಹನ ಬರಲಿಲ್ಲ. ಮಂಗಳವಾರ ಮಧ್ಯಾಹ್ನ 2-45 ವೇಳೆ ಪ್ರಸವ ವೇದನೆ ಅತಿಯಾದಾಗ ಆಶಾ ಕಾರ್ಯಕರ್ತೆ ದೊಡ್ಡಮ್ಮ ಅವರು, ಗರ್ಭಿಣಿ ಅಯ್ಯಮ್ಮಳನ್ನು ಟಂ ಟಂ ವಾಹನದಲ್ಲಿ ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆ ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ.
ಆಶಾ ಕಾರ್ಯಕರ್ತೆ ದೊಡ್ಡಮ್ಮ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ಹಿರೇಮನ್ನಾಪೂರಕ್ಕೆ ದಾಖಲು ಮಾಡಿದ್ದಾರೆ.
ಹಿರೇಮನ್ನಾಪೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಿ- ಮಗು ಆರೋಗ್ಯವಾಗಿದ್ದಾರೆ. ಅಯ್ಯಮ್ಮಳ ಹೆರಿಗೆ ಸಂದರ್ಭದಲ್ಲಿ ಸುರಕ್ಷಿತ ಹೆರಿಗೆಗೆ ಸಮಯ ಪ್ರಜ್ಞೆ ಮೆರೆದ ಆಶಾ ಕಾರ್ಯಕರ್ತೆ ದೊಡ್ಡಮ್ಮ ಹಾಗೂ ಟಂಟಂ ಚಾಲಕ ಉಮಾಪತಿ ಹಿರೇಮಠ ಅವರ ಬಗ್ಗೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಗಿದೆ.
ಆದರೆ ಸಕಾಲದಲ್ಲಿ ಸೇವೆ ಒದಗಿಸದ ಆರೋಗ್ಯ ಇಲಾಖೆಯ 108 ಅ್ಯಂಬ್ಯುಲೆನ್ಸ್ ಇದ್ದರೂ ಇಲ್ಲದಂತಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕುಷ್ಟಗಿ, ಹನುಮಸಾಗರ ಹಾಗೂ ತಾವರಗೇರಾ ಆಸ್ಪತ್ರೆಗಳಲ್ಲಿ ಒಂದೂ 108 ಅ್ಯಂಬ್ಯುಲೆನ್ಸ್ ಸಕಾಲದಲ್ಲಿ ಸರ್ಕಾರಿ ಸೇವೆ ನೀಡದೆ ಇರುವುದು ದುರದೃಷ್ಟಕರ.