Advertisement

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

10:07 PM Mar 04, 2021 | Team Udayavani |

ಮಹಾನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಡ್ರೋನ್‌ ಬಳಸಿ ಆಸ್ತಿಗಳ ಅಳತೆ ಮಾಡಿ ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವ ಸ್ವಾಮಿತ್ವ  ಯೋಜನೆಯಡಿಯಲ್ಲಿ ದ.ಕ. ಜಿಲ್ಲೆಯಲ್ಲಿ ಮಾ.1ರ ವರೆಗೆ 86 ಗ್ರಾಮಗಳಲ್ಲಿ ಮಾರ್ಕಿಂಗ್‌ ಪೂರ್ಣಗೊಂಡಿದೆ. ಈ ಪೈಕಿ 327 ಹ್ಯಾಮ್ಲೆಟ್‌ಗಳಲ್ಲಿ (ಜನವಸತಿ ಪ್ರದೇಶ)10,748 ಆಸ್ತಿಗಳನ್ನು ಗುರುತಿಸಲಾಗಿದೆ.

Advertisement

ಸ್ವಾಮಿತ್ವ  ಯೋಜನೆಯಲ್ಲಿ ರಾಜ್ಯ ದಲ್ಲಿ ಆರಂಭಿಕ ಹಂತದಲ್ಲಿ 16 ಜಿಲ್ಲೆ ಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ದ.ಕ. ಜಿಲ್ಲೆಯು ಒಂದಾಗಿತ್ತು. ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 90 ಗ್ರಾಮಗಳನ್ನು ಆಯ್ಕೆ ಮಾಡಿ ಸೆಪ್ಟಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಜಿಲ್ಲೆಯಲ್ಲಿ ಮಾರ್ಕಿಂಗ್‌ ಮುಗಿದಿರುವ ತಾಣಗಳಲ್ಲಿ ಡ್ರೋನ್‌  ಸರ್ವೇ ಪ್ರಗತಿಯಲ್ಲಿದೆ. ಎರಡು ಡ್ರೋನ್‌ ಗಳು ಸರ್ವೇ ಕಾರ್ಯದಲ್ಲಿ ನಿರತವಾಗಿವೆ. ಸ್ವಾಮಿತ್ವ  ಯೋಜನೆ ಪ್ರಕಾರ ಕನಿಷ್ಟ 10ಕ್ಕಿಂತ ಜಾಸ್ತಿ ಮನೆಗಳು ಒಂದೇ ಕಡೆ ಇರುವ ಪ್ರದೇಶವನ್ನು ಒಂದು ಹ್ಯಾಮ್ಲೆಟ್‌ ಎಂದು ಪರಿಗಣಿಸಲಾಗುತ್ತಿದೆ. ಕಂದಾಯ ಇಲಾಖೆಯ ಭೂಮಾಪಕರು ಮತ್ತು ಗ್ರಾ.ಪಂ. ಅಧಿಕಾರಿಗಳು ಜಂಟಿಯಾಗಿ ಆಯ್ಕೆಯಾಗಿರುವ ಗ್ರಾಮಗಳ ಜನ ವಸತಿ ಪ್ರದೇಶದ ಪ್ರತಿ ಆಸ್ತಿಯನ್ನು ಸಂಬಂಧಿತ ಭೂಮಾಲಕರ ಸಮ್ಮುಖದಲ್ಲಿ ಪರಿಶೀಲಿಸಿ ಗುರುತು ಮಾಡುತ್ತಾರೆ.

ಮಾರ್ಕಿಂಗ್‌ ಮುಗಿದಿರುವ ಗ್ರಾಮಗಳಲ್ಲಿ ಗುರುತಿಸಿರುವ 237 ಹ್ಯಾಮ್ಲೆಟ್‌ಗಳ ಪೈಕಿ 116 ಹ್ಯಾಮ್ಲೆಟ್‌ಗಳಲ್ಲಿ ಡ್ರೋನ್‌  ಸರ್ವೇ ನಡೆಸಲಾಗಿದೆ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ತಾಲೂಕುಗಳಲ್ಲಿ ಈಗಾಗಲೇ ಡ್ರೋನ್‌  ಸರ್ವೇ ಸಂಪೂರ್ಣಗೊಂಡಿದ್ದು, ಸುಳ್ಯದಲ್ಲಿ ಇನ್ನೆರಡು ದಿನಗಳಲ್ಲಿ ಪೂರ್ಣವಾಗಲಿವೆ. ಕಡಬದಲ್ಲಿ ಸೋಮವಾರದಿಂದ ಡ್ರೋನ್‌  ಸರ್ವೇ ಆರಂಭವಾಗಲಿದೆ ಎಂದು ಸ್ವಾಮಿತ್ವ  ಯೋಜನೆಯ ಅನುಷ್ಠಾನದ ಹೊಣೆಯನ್ನು ವಹಿಸಿರುವ ಭೂಮಾಪನ ಇಲಾಖೆ ಮೂಲಗಳು ತಿಳಿಸಿವೆ.

ಮುಂದಿನ ಹಂತವಾಗಿ ಡ್ರೋನ್‌ ಸರ್ವೇಯಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಸಂಸ್ಕರಿಸಿ ಗುರುತಿಸಲಾದ ಆಸ್ತಿಗಳ ನಕಾಶೆ ತಯಾರಿಸಲಾಗುತ್ತದೆ. ಗ್ರಾ.ಪಂ.ಗಳಲ್ಲಿ ನಮೂದಾಗಿರುವ ದಾಖಲಾತಿಗಳ ಜತೆ ಹೊಂದಾಣಿಕೆ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಗ್ರಾಮಸ್ಥರ ಜತೆ ಸಭೆ ನಡೆಸಿ ತಕರಾರುಗಳಿದ್ದರೆ ಇತ್ಯರ್ಥಪಡಿಸಿ ಸರಕಾರದ ದಾಖಲಾತಿಗೆ ರವಾನಿಸಲಾಗುತ್ತದೆ. ಆಗ ಹೆಸರು ಹಾಗೂ ಇನ್ನಿತರ ತಿದ್ದುಪಡಿಗೂ ಅವಕಾಶವಿರುತ್ತದೆ. ಅಂತಿಮವಾಗಿ ಆಸ್ತಿ ಮಾಲಕರಿಗೆ ಪ್ರಾಪರ್ಟಿ ಕಾರ್ಡ್‌ ನೀಡಲಾಗುತ್ತದೆ.

Advertisement

ಸ್ವಾಮಿತ್ವ ದ ಯೋಜನೆಯಲ್ಲಿ ಸರ್ವೆ ಹೆಚ್ಚು ನಿಖರವಾಗಿರುವುದರಿಂದ ಆಸ್ತಿ ಮಾಲಕತ್ವ ಬಗ್ಗೆ ಇರುವ ಸಮಸ್ಯೆಗಳು ಮತ್ತು ಗೊಂದಲಗಳು ಬಗೆಹರಿಯಲಿವೆ. ಆಸ್ತಿದಾರರಿಗೆ ಸರಿಯಾದ ನಕ್ಷೆಯೊಂದಿಗೆ ಶಾಸನಬದ್ದ ಆಸ್ತಿ ದಾಖಲೆಗಳನ್ನು ಲಭ್ಯವಾಗುತ್ತವೆ. ಹಕ್ಕು ದಾಖಲೆ ಸಿದ್ದಪಡಿಸುವಿಕೆ, ಆಸ್ತಿಗಳ ವರ್ಗಾವಣೆ ಕಾರ್ಯ ಸುಗಮವಾಗಿ ನಡೆಯುತ್ತವೆ. ಆಸ್ತಿಗಳ ನಿಖರ ಮಾಹಿತಿ ಲಭ್ಯವಾಗುವುದರಿಂದ ತೆರಿಗೆಯನ್ನು ಕರಾರುವಕ್ಕಾಗಿ ನಿರ್ಧರಿಸಲು ಆಡಳಿತ ವ್ಯವಸ್ಥೆಗೂ ಸಹಾಯವಾಗುತ್ತದೆ ಎಂಬುದಾಗಿ ಇಲಾಖೆ ಹೇಳಿದೆ.

ದ.ಕ. ಜಿಲ್ಲೆಯಲ್ಲಿ ಸ್ವಾಮಿತ್ವ  ಯೋಜನೆ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾರ್ಕಿಂಗ್‌ ಆಗಿರುವ ಗ್ರಾಮಗಳಲ್ಲಿ ಡ್ರೋನ್‌  ಸರ್ವೇ ಪ್ರಕ್ರಿಯೆ ನಡೆಯುತ್ತಿದ್ದು ಈಗಾಗಲೇ 5 ತಾಲೂಕುಗಳಲ್ಲಿ ಪೂರ್ಣಗೊಂಡಿವೆ. ಮುಂದಿನ ವಾರದೊಳಗೆ ಉಳಿದ 2 ತಾಲೂಕುಗಳಲ್ಲಿ ಡ್ರೋನ್‌  ಸರ್ವೇ ಮುಕ್ತಾಯವಾಗಲಿದ್ದು ಬಳಿಕ ನಕ್ಷೆ ಸಿದ್ಧಪಡಿಸುವುದಕ್ಕೆ ಪೂರಕ ಪ್ರಕ್ರಿಯೆಗಳು ನಡೆಯಲಿವೆ.ನಿರಂಜನ್‌,  ಭೂಮಾಪನ ಇಲಾಖೆ ಉಪ ನಿರ್ದೇಶಕರು, ದ.ಕ.

Advertisement

Udayavani is now on Telegram. Click here to join our channel and stay updated with the latest news.