ಬೆಂಗಳೂರಿನ ಹಳೇ ಬಡಾವಣೆ ಮಲ್ಲೇಶ್ವರಂನಲ್ಲಿ ಸದಾ ಸಾಂಸ್ಕೃತಿಕ ತಂಗಾಳಿ ಬೀಸುತ್ತಿರುತ್ತೆ. ಎತ್ತರದ ಕಟ್ಟಡಗಳ ನಡುವೆ ಚಂದ್ರನೇ ಕಾಣುವುದಿಲ್ಲ ಎಂಬ ಕೊರಗಿನಲ್ಲಿರುವ ಬೆಂಗಳೂರಿಗೆ ಚಂದ್ರಮವನ್ನು ಅದೇ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಮಲ್ಲೇಶ್ವರಂ ತೋರಿಸುತ್ತಿದೆ. ಪ್ರತಿ ಪೌರ್ಣಿಮೆಗೆ ಅಲ್ಲಿ ಹುಣ್ಣಿಮೆ ಹಾಡು ಆಯೋಜನೆ ಆಗುತ್ತೆ. ಕಾಡುಮಲ್ಲೇಶ್ವರ ಗೆಳೆಯರ ಬಳಗ ಈ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಿಕೊಡುತ್ತೆ.
ದಾಸ, ಶರಣ, ಸೂಫಿ, ಕಬೀರ, ಜಾನಪದ ಪರಂಪರೆ, ಪ್ರಗತಿಪರ, ಸಾಮಾಜಿಕ ಚಿಂತನೆಗೆ ಹಚ್ಚುವ ಹಾದಿಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದ ಕಲಾವಿದರು ಇಲ್ಲಿ ಗಾನದ ಹೊನಲನ್ನು ಹರಿಸಲಿದ್ದಾರೆ. ಜನಪದ, ವಚನ, ತತ್ವಪದ, ಶಾಸ್ತ್ರೀಯ, ಹಿಂದೂಸ್ಥಾನಿ, ಭಜನೆ, ಸುಗಮ, ಭಾವಗೀತೆಗಳನ್ನು ಪರಿಸರ ಪ್ರೀತಿಯ, ಮನುಜ ಪ್ರೇಮದ ಹಾಡುಗಳನ್ನು ಹಾಡಿದ್ದಾರೆ.
ಈ ಹುಣ್ಣಿಮೆ ಹಾಡಿಗೆ ಈಗ 100ನೇ ಸಂಭ್ರಮ. ನ.4ರ ಶನಿವಾರ ಬೆಳಗ್ಗೆ 9ಕ್ಕೆ ಹಸಿರು ಚೈತನ್ಯೋತ್ಸವ ಮೂಲಕ ಕಾರ್ಯಕ್ರಮ ಚಾಲನೆ ಗೊಳ್ಳಲಿದೆ. ಸಂಜೆ 6.30ಕ್ಕೆ ಉಸ್ತಾದ್ ಹಫೀಜ್ ಬಾಲೇಖಾನ್, ಉಸ್ತಾದ್ ರಯೀಜ್ ಬಾಲೇಖಾನ್ ಹಾಗೂ 25 ಸಿತಾರ್ ಕಲಾವಿದರಿಂದ “ಸಿತಾರ್ ತರಂಗ- ದಾಸಶರಣ ಪದಮಾಧುರ್ಯ’ ನಡೆಯಲಿದೆ.
ನ.5ರ ಬೆಳಗ್ಗೆ ಮೊಟ್ಟ ಮೊದಲ ಬಾರಿಗೆ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ. ಇದೇ ವೇಳೆ ಕೋಲಾರದ “ಈ ಭೂಮಿ’ ಕಲಾ ತಂಡದವರಿಂದ ತಮಟೆ ಮೆರುಗು ಜನರನ್ನು ಆಕರ್ಷಿಸಲಿದೆ. ಸಂಜೆ 6.30ಕ್ಕೆ ಖ್ಯಾತ ವಯೋಲಿನ್ ವಾದಕರಾದ ಚೆನ್ನೈನ ವಿದ್ವಾನ್ ಕುಮರೇಶ್ ಮತ್ತು ವಿದ್ವಾನ್ ಗಣೇಶ್ ತಂಡದವರಿಂದ “ವಯೋಲಿನ್ ವೈಭವ’ ಆಯೋಜಿಸಲಾಗಿದೆ.
ನ.6ರ ಸೋಮವಾರ “ಹುಣ್ಣಿಮೆ ಹಾಡು’ ಶತ ಸಂಭ್ರಮದ ಸಮಾರೋಪ ನಡೆಯಲಿದ್ದು, ತದನಂತರ ಸಂ.6.30ಕ್ಕೆ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ “ಸಂಗೀತ ಸುಧೆ’ ಗಾಯನ ಕಾರ್ಯಕ್ರಮ ನಡೆಯಲಿದೆ.
ಎಲ್ಲಿ?: ಕಾಡುಮಲ್ಲೇಶ್ವರ ಬಯಲುಮಂಟಪ, ಮಲ್ಲೇಶ್ವರ
ಯಾವಾಗ?: ನ.4, 5 ಮತ್ತು 6
ಸಂಪರ್ಕ: 9886707204