ಹೊಸದಿಲ್ಲಿ: ಕಳೆದ ಎರಡು ತಿಂಗಳ ದೇಶಾದ್ಯಂತ ಪ್ರತಿದಿನ ನಡೆಸುವ ಕೋವಿಡ್ ಪರೀಕ್ಷೆಯ ಪ್ರಮಾಣ ಒಂದು ಸಾವಿರ ಪಟ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಪ್ರತಿ ಕೋವಿಡ್ ಪಾಸಿಟಿವ್ ಪರೀಕ್ಷೆಗೆ 20ಕ್ಕೂ ಹೆಚ್ಚು ನೆಗೆಟಿವ್ ಪರೀಕ್ಷೆಗಳು ನಡೆದಿವೆ. ಒಟ್ಟಿನಲ್ಲಿ ಪರೀಕ್ಷಾ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ ಎಂದು ಐಸಿಎಂಆರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 20ರವರೆಗೆ ದೇಶಾದ್ಯಂತ ಒಟ್ಟಾರೆ 25,12,388 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದ್ದು, ಪರೀಕ್ಷಾ ಸಾಮರ್ಥ್ಯವು ದಿನಕ್ಕೆ 1 ಲಕ್ಷಕ್ಕೇರಿದೆ ಎಂದೂ ಅವರು ಹೇಳಿದ್ದಾರೆ.
2 ತಿಂಗಳ ಹಿಂದೆ ದಿನಕ್ಕೆ 100ಕ್ಕಿಂತಲೂ ಕಡಿಮೆ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. 60 ದಿನಗಳ ಅವಧಿಯಲ್ಲಿ ಇದು ಸಾವಿರ ಪಟ್ಟು ಅಧಿಕವಾಗಿದೆ. ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಪರೀಕ್ಷಾ ಪ್ರಯೋಗಾಲಯಗಳು, ಸಚಿವಾಲಯಗಳು, ವಿಮಾನಯಾನ ಕಂಪನಿಗಳು ಹಾಗೂ ಅಂಚೆ ಸೇವೆಗಳು ಕೈಜೋಡಿಸಿದ್ದರ ಫಲವಾಗಿ ಇದನ್ನು ಸಾಧಿಸಲು ಸಾಧ್ಯವಾಯಿತು ಎಂದೂ ಐಸಿಎಂಆರ್ ಹೇಳಿದೆ.
ಜನವರಿ ತಿಂಗಳಲ್ಲಿ, ದೇಶದಲ್ಲಿ ಕೇವಲ ಒಂದು ಪ್ರಯೋಗಾಲಯವಿತ್ತು. ಪ್ರಸ್ತುತ 555 ಪ್ರಯೋಗಾಲಯಗಳಿದ್ದು, ಇವುಗಳು ಕೋವಿಡ್ ಪರೀಕ್ಷೆಯಲ್ಲಿ ತೊಡಗಿಕೊಂಡಿವೆ. ಇದು ಭಾರತೀಯ ಆರೋಗ್ಯ ವ್ಯವಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ಸಾಧನೆಯಾಗಿದೆ ಎಂದಿದೆ ಐಸಿಎಂಆರ್.
ಈಗ ಗುಣಮುಖ ಪ್ರಮಾಣ ಶೇ.40.32: ದೇಶದಲ್ಲಿ ಕೋವಿಡ್ ಸೋಂಕಿನ ಗುಣಮುಖ ಪ್ರಮಾಣ ಈಗ ಶೇ.40.32ಕ್ಕೇರಿದ್ದು, 45,299 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರದಿಂದ ಗುರುವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ 132 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ದೇಶಾದ್ಯಂತ ಒಟ್ಟಾರೆ 5,609 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಅತಿ ಹೆಚ್ಚು ಸಾವು ಅಂದರೆ 65 ಸಾವು ಮಹಾರಾಷ್ಟ್ರವೊಂದರಲ್ಲೇ ಸಂಭವಿಸಿದರೆ, ಗುಜರಾತ್ ನಲ್ಲಿ ಒಂದೇ ದಿನ 30, ಮಧ್ಯಪ್ರದೇಶದಲ್ಲಿ 9, ದೆಹಲಿಯಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.