Advertisement

ಎಸಿ ಕಚೇರಿಯ 100 ವರ್ಷಗಳ ದಾಖಲೆ ಡಿಜಿಟಲೀಕರಣ

02:26 PM Feb 11, 2022 | Team Udayavani |

ರಾಯಚೂರು: ಈಗ ಸರ್ಕಾರಿ ಕಚೇರಿಗಳು ಕಾಗದರಹಿತ (ಪೇಪರ್‌ ಲೆಸ್‌) ವ್ಯವಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಅದರ ಭಾಗವಾಗಿ ಇಲ್ಲಿನ ಸಹಾಯಕ ಆಯುಕ್ತ ಕಚೇರಿ ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು ನೂರು ವರ್ಷಗಳಿಗೂ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಮುಂದಾಗಿದೆ.

Advertisement

ರಾಜ್ಯದ ವಿವಿಧೆಡೆ ಇಂಥ ಸೌಲಭ್ಯಗಳು ಈಗಾಗಲೇ ಜಾರಿ ಮಾಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಎರಡ್ಮೂರು ತಲೆಮಾರುಗಳ ದಾಖಲೆಗಳನ್ನು ಪಡೆಯಬೇಕಾದರೆ ಹರಸಾಹಸ ಪಡಬೇಕಿತ್ತು. ಅದರಲ್ಲೂ ಭೂ ದಾಖಲೆಗಳನ್ನು ಪಡೆಯಲು ಕಚೇರಿ ಸಿಬ್ಬಂದಿ ಜನರನ್ನು ಪದೇ ಪದೇ ಅಲೆದಾಡಿಸುತ್ತಿದ್ದರು. ಅವರು ಆ ರೀತಿ ಮಾಡಲು ದಾಖಲೆಗಳ ಹುಡುಕಾಟಕ್ಕೆ ಹಿಡಿಯುತ್ತಿದ್ದ ಸಮಯವೂ ಕಾರಣವಾಗುತ್ತಿತ್ತು.

ಮೂರು ತಿಂಗಳಿಂದ ಕೆಲಸ

1880ರ ನಂತರದ ಅನೇಕ ದಾಖಲೆಗಳಿವೆ. ಇನಾಂ ಭೂಮಿ, ಭೂ ಸ್ವಾಧೀನ ದಾಖಲೆಗಳು, ವ್ಯಾಜ್ಯಗಳ ದಾಖಲೆಗಳು ಸೇರಿದಂತೆ ಅನೇಕ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಹಿಂದೆ ರೈತರು ಬಂದು ದಾಖಲೆ ಕೇಳಿದಾಗ ಒಂದೊಂದು ತಿಂಗಳು ಕಾಯಿಸಿದ ನಿದರ್ಶನಗಳಿವೆ. ಸಕಾಲಕ್ಕೆ ದಾಖಲೆಗಳು ಸಿಗದ ಕಾರಣ ಎಷ್ಟೊ ಜನರಿಗೆ ಪರಿಹಾರವೂ ಕೈ ತಪ್ಪಿ ಹೋದ ಉದಾಹರಗಳಿವೆ ಎನ್ನುತ್ತಾರೆ ಅಧಿಕಾರಿಗಳು. ಹಿಂದಿನ ಜಿಲ್ಲಾಧಿಕಾರಿ ವೆಂಟಕೇಶ ಕುಮಾರ್‌ ಅವ ಧಿಯಲ್ಲಿ ಹಿಂದಿನ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಇಚ್ಛಾಶಕ್ತಿಯಿಂದ ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ.

ಕೆಟಿಟಿಪಿ ಕಾಯ್ದೆ ಅನುಸಾರ ಇ-ಟೆಂಡರ್‌ ಪ್ರಕ್ರಿಯೆ ನಡೆಸುವ ಮೂಲಕ ಓರಾr ಟೆಕ್‌ ಎನ್ನುವ ಸಂಸ್ಥೆಗೆ ಡಿಜಿಟಲೀಕರಣ ಹೊಣೆ ನೀಡಲಾಗಿದೆ. ಸಂಸ್ಥೆ ಮೂರು ತಿಂಗಳಲ್ಲಿ ಈ ಕೆಲಸ ಮುಗಿಸಿ ಕೊಟ್ಟಿದ್ದಾರೆ. ಪ್ರತಿ ಪುಟವನ್ನು ಸ್ಕ್ಯಾನ್‌ ಮಾಡಲಾಗಿದೆ. 14 ಲಕ್ಷಕ್ಕೂ ಅಧಿಕ ಪುಟಗಳು ಡಿಜಿಟಲೈಜೇಶನ್‌ ಮಾಡಲಾಗಿದೆ. ರೈತರು ಬಂದು ತಮ್ಮ ಹೆಸರು, ಸರ್ವೇ ನಂಬರ್‌, ಇಲ್ಲವೇ ಕೇಸ್‌ ನಂಬರ್‌ ಹೇಳಿದರೂ ಎರಡು ನಿಮಿಷಗಳಲ್ಲಿ ದಾಖಲೆ ನೀಡುವ ವ್ಯವಸ್ಥೆ ನಿರ್ಮಾಣಗೊಂಡಿದೆ.

Advertisement

ದಾಖಲೆಗಳ ಮರು ನಿರ್ಮಾಣ

ಈ ಒಂದು ಕಾರ್ಯಕ್ರಮದಿಂದ ಅನೇಕ ರೀತಿಯ ಉಪಯೋಗಗಳು ಉಂಟಾಗಲಿದೆ. ಕಚೇರಿ ಸಿಬ್ಬಂದಿಗೆ ಹೆಚ್ಚಿನ ಶ್ರಮ ತಪ್ಪಲಿದೆ. ಅದರ ಜತೆಗೆ ಜನರಿಗೂ ಯಾವುದೇ ಕೆಲಸಕ್ಕೆ ಕಚೇರಿಗಳಿಗೆ ತಿಂಗಳಾನುಗಟ್ಟಲೇ ಅಲೆಯುವ ತಾಪತ್ರಯ ಕೂಡ ತಪ್ಪಲಿದೆ. ಮೊದಲೇ ಹೇಳಿದಂತೆ ಸುಮಾರು 1880ರಿಂದಲೂ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಯತ್ನ ನಡೆದಿದೆ. ಆದರೆ, ಹಿಂದಿನ ದಾಖಲೆಗಳು ಸಂಪೂರ್ಣ ಹಾಳಾಗುವ ಹಂತಕ್ಕೆ ತಲುಪಿದ್ದರಿಂದ ಅಂಥ ದಾಖಲೆಗಳನ್ನು ಮತ್ತೆ ತಯಾರಿಸಿ ಇಡಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಮೂಲ ದಾಖಲೆಗಳನ್ನು ನೋಡಲೇಬೇಕಾದ ಪ್ರಸಂಗ ಬಂದಾಗ ಕೈಗೆ ಸುಲಭವಾಗಿ ಸಿಗುವ ರೀತಿಯಲ್ಲಿ ಸಂಗ್ರಹಿಸಲಾಗಿದೆ. ಬಂಡಲ್‌ಗ‌ಳ ಮೇಲೆಯೇ ನಂಬರ್‌ ನೀಡಲಾಗಿದೆ. ಕಂಪ್ಯೂಟರ್‌ನಲ್ಲಿ ಬೇಕಾದ ದಾಖಲೆಯ ವಿವರ ಕೇಳಿದರೆ ಅದು ಎಷ್ಟರೇ ರ್ಯಾಕ್‌ ನಲ್ಲಿದೆ ಎಂಬ ವಿವರ ಕೂಡ ನೀಡುತ್ತದೆ. ಕೆಲಸವನ್ನು ಬಹಳ ಹಗುರಗೊಳಿಸಿದೆ.

ಕ್ರೌಡ್‌ ಸ್ಟೋರೇಜ್‌ಗೂ ಒತ್ತು

ಈಗ ಎಲ್ಲ ದಾಖಲೆಗಳನ್ನು ಕೇವಲ ಡಿಜಿಟಲೀಕರಣ ಮಾಡಿ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಲಾಗಿದೆ. ಅನ್ನು ಕ್ರೌಡ್‌ ಸ್ಟೋರೇಜ್‌ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಒಂದು ವೇಳೆ ಕಂಪ್ಯೂಟರ್‌ಗಳಲ್ಲಿ ದಾಖಲೆಗಳು ತಪ್ಪಿ ಹೋದರೆ ಇಂಟರ್‌ನೆಟ್‌ ನೆರವಿನಿಂದ ದಾಖಲೆ ಮರಳಿ ಪಡೆಯಲು ಸುಲಭವಾಗುವ ರೀತಿ ಸ್ಟೋರೇಜ್‌ ಮಾಡುವ ಚಿಂತನೆ ಕೂಡ ಮಾಡಲಾಗುತ್ತಿದೆ.

ಇದೊಂದು ಮಹತ್ವಾಕಾಂಕ್ಷಿ ಯೋಜನೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂಥ ವ್ಯವಸ್ಥೆ ಜಾರಿ ಮಾಡಿರುವ ಮಾಹಿತಿ ಇತ್ತು. ಅದನ್ನು ನಮ್ಮಲ್ಲೂ ಅನುಷ್ಠಾನ ಮಾಡಬೇಕು ಎನ್ನುವ ಕಾರಣಕ್ಕೆ ಹಿಂದಿನ ಡಿಸಿ ವೆಂಕಟೇಶ ಕುಮಾರ್‌ ಜತೆ ಚರ್ಚಿಸಿ ಅವರಿಗೆ ಯೋಜನೆ ಬಗ್ಗೆ ತಿಳಿ ಹೇಳಲಾಗಿತ್ತು. ಅದಕ್ಕೆ ಅವರು ಒಪ್ಪಿಗೆ ನೀಡಿ ಅನುದಾನ ಬಳಸಿಕೊಳ್ಳಲು ಅನುಮೋದನೆ ನೀಡಿದ್ದರು. ಮೂರು ತಿಂಗಳ ಹಿಂದೆಯೇ ಕೆಲಸ ಆರಂಭವಾಗಿದ್ದು, ಕೊನೆ ಹಂತದಲ್ಲಿದೆ. ಈಗಿನ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ನೆರವಿನೊಂದಿಗೆ ಡಿಜಿಟಲೀಕರಣ ಮುಗಿಸಲಾಗುತ್ತಿದೆ. -ಸಂತೋಷ ಕಾಮಗೌಡ, ಹಿಂದಿನ ಸಹಾಯಕ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next