Advertisement
ಈ ಬಾರಿಯ ಚುನಾವಣೆಯಲ್ಲಿ ಪ್ರತೀ ಹಂತದಲ್ಲೂ ಮತದಾನ ಪ್ರಮಾಣ ಕುರಿತು ಭಾರೀ ಚರ್ಚೆಗಳು ನಡೆದವು. ವಿಶೇಷವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಮತದಾರರ ನಿರಾಸಕ್ತಿ ಎಂದಿನಂತೆ ಮುಂದುವರಿದಿತ್ತು.
Related Articles
Advertisement
ಅಪರೂಪದಲ್ಲಿ ಅಪರೂಪ ಎನ್ನುವಂತೆ ಆ ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗಿರುವುದನ್ನು ಕೇಳಿ ನನಗೆ ಅಚ್ಚರಿ, ಸಂತೋಷ ಮತ್ತು ಆ ಮತದಾರರ ಬಗ್ಗೆ ಗೌರವ ಉಂಟಾಯಿತು. ಈ ಕುರಿತು ನಾನೆ ಖುದ್ದಾಗಿ ಬಾಂಜಾರು ಮಲೆಗೆ ಭೇಟಿಕೊಟ್ಟು, ಅಲ್ಲಿನ ಮತದಾರರ ಜತೆ ಕುಳಿತು ಸಂವಾದ ನಡೆಸುವ ನಿರ್ಧಾರ ಕೈಗೊಂಡೆ. ನನ್ನ ಈ ಉದ್ದೇಶ ಕುರಿತು ಸ್ಥಳೀಯ ಶಾಸಕ ಹರೀಶ್ ಪೂಂಜಾ ಅವರ ಜತೆಗೂ ಚರ್ಚಿಸಿದೆ. ಕಳೆದ ಶುಕ್ರವಾರ ಜೂನ್ 7 ರಂದು ನಾನು ನೆರಿಯ ಗ್ರಾಮ ಪಂಚಾಯತ್‌ನ ಬಾಂಜಾರು ಮಲೆಗೆ ಭೇಟಿ ನೀಡಿದ್ದೆ. ಚಾರ್ಮಾಡಿ ಘಾಟ್ ರಸ್ತೆಯಿಂದ ಸುಮಾರು 11 ಕಿ.ಮೀ. ದುರ್ಗಮ ಹಾದಿಯಲ್ಲಿ ಸಾಗಿದ ಅನಂತರ ಸಿಕ್ಕಿತು ನಮ್ಮ ಈ ಬಾಂಜಾರು ಮಲೆ.
ಈ ಪ್ರದೇಶದಲ್ಲಿ ಸುಮಾರು 50 ಮನೆಗಳಿವೆ. ಮನೆಗಳು ಅಂದರೆ ನಮ್ಮ ಊರುಗಳಲ್ಲಿ ಇದ್ದಂತೆ ಅಕ್ಕಪಕ್ಕ ಇರುವಂಥದ್ದಲ್ಲ. ಒಂದು ಮನೆಯಿಂದ ಇನ್ನೊಂದು ಮನೆಗೆ ಕನಿಷ್ಠ ಅರ್ಧ ಕಿ. ಮೀ. ಅಂತರವಿದೆ. ಇಲ್ಲಿನ ಜನಸಂಖ್ಯೆ ಸುಮಾರು 160. ಮತದಾರರ ಸಂಖ್ಯೆ 111. ಮತದಾರರ ಪೈಕಿ ನಾಲ್ಕೈದು ಜನ ಮೈಸೂರು, ಮಂಡ್ಯ, ಮಂಗಳೂರು, ಬೆಂಗಳೂರು… ಮುಂತಾದ ಕಡೆ ನೌಕರಿ ಮಾಡುತ್ತಿದ್ದಾರೆ. ಒಬ್ಬರು ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ ಸಹ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರದೇಶದ ಜನ ಮೂಲ ಸೌಕರ್ಯಗಳಾದ ರಸ್ತೆ, ಸೇತುವೆ ತಮಗಿಲ್ಲ ಎಂಬ ಸಾತ್ವಿಕ ಕೋಪದಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಆಗ ಅಲ್ಲಿನ ಜಿಲ್ಲಾಡಳಿತ ಇವರನ್ನು ಸಂಪರ್ಕಿಸಿ ಮನವೊಲಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿತು. ಆಗ ಸುಮಾರು ಶೇ.98ರಷ್ಟು ಮತ ಚಲಾವಣೆ ಆಗಿತ್ತು. ಆದರೆ ಬಾಂಜಾರ ಮಲೆಗೆ ಬೇಕಿದ್ದ ಆ ಎರಡು ಕನಿಷ್ಠ ಸೌಲಭ್ಯಗಳು ಒದಗಿ ಬರಲಿಲ್ಲ.
ಈ ಲೋಕಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ಚುನಾವಣೆ ಬಹಿಷ್ಕರಿಸುವ ಅನಿಸಿಕೆ ಗ್ರಾಮಸ್ಥರ ಮನದಲ್ಲಿ ಹಾದು ಹೋಗಿದ್ದು ಸುಳ್ಳಲ್ಲ. ಆದರೆ, ಮತದಾನ ಬಹಿಷ್ಕಾರ ಮಾಡುವುದರ ಬದಲು ಶೇ.100ರಷ್ಟು ಮತ ಚಲಾವಣೆ ಮಾಡಿ, ಆಡಳಿತ ಯಂತ್ರದ ಗಮನ ಸೆಳೆಯುವ ಹೊಸ ಪ್ರಯತ್ನ ಈ ಗ್ರಾಮಸ್ಥರು ಮಾಡಿದರು.
ಮತದಾನದ ದಿನ ನೂರಾರು ಕಿ. ಮೀ. ದೂರದಿಂದ ಬಂದ ಆ ನಾಲ್ಕೈದು ಮತದಾರರೂ ಸೇರಿದಂತೆ ಎಲ್ಲ 111 ಅರ್ಹ ಮತದಾರರು ಮತ ಚಲಾಯಿಸಿದ್ದಾರೆ. ಇವರ ಈ ಪ್ರಯತ್ನಕ್ಕೆ ಬೆನ್ನು ತಟ್ಟಿ ಅವರ ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುವುದು ನನ್ನ ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು.
ಬಾಂಜಾರ ಮಲೆಗೆ ಹೋದವರು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಿ ಮೈ ಮರೆಯುವುದು ಖಚಿತ. ಅಂತಹ ಸುಂದರ ತಾಣ ಇದು. ಆದರೆ ಅಲ್ಲಿಯೇ ಪ್ರತಿನಿತ್ಯ ಬದುಕುವವರಿಗೆ ಕನಿಷ್ಠ ಸೌಲಭ್ಯವು ಇಲ್ಲದಿರುವುದು ನಿಜಕ್ಕೂ ಬೇಸರ ತರುತ್ತದೆ. ಅನೇಕ ತಲೆಮಾರುಗಳಿಂದ ಇಲ್ಲಿಯೇ ವಾಸ ಮಾಡುತ್ತಿರುವ ಈ ಎಲ್ಲ ಕುಟುಂಬಗಳು ಮಲೆಕುಡಿಯ ಎಂಬ ಪರಿಶಿಷ್ಟ ಪಂಗಡಕ್ಕೆ ಬರುವ ಸಮುದಾಯದವರು. ನಾನು ಭೇಟಿ ಮಾಡಿದ ವ್ಯಕ್ತಿಗಳಲ್ಲಿ ಎಸ್ಸೆಸ್ಸೆಲ್ಸಿವರೆಗೂ ಓದಿ ಅಲ್ಲೇ ಉಳಿದಿರುವ ಯುವಕರೂ ಇದ್ದಾರೆ.
ಓರ್ವ ಯುವಕ ಪಿಯುಸಿ ಮುಗಿಸಿದ್ದಾರೆ. ಅಡಿಕೆ, ತೆಂಗು, ಕಾಳಮೆಣಸು… ಇವರು ಬೆಳೆಯುವ ಉತ್ಪನ್ನಗಳು. ಪ್ರತೀ ಕುಟುಂಬಕ್ಕೂ ರೇಷನ್ ಕಾರ್ಡ್ ಇದೆ. ಕೆಲವರನ್ನು ಬಿಟ್ಟರೆ ಬಹುತೇಕ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ ದೊರಕಿದೆ. ಸಂಚಾರಿ ಪಡಿತರ ವಾಹನ ತಿಂಗಳಿಗೆ ಒಮ್ಮೆ ಇಲ್ಲಿಗೆ ಬಂದು ಎಲ್ಲ ಕುಟುಂಬಗಳಿಗೂ ರೇಷನ್ ವಿತರಿಸುವ ವ್ಯವಸ್ಥೆಯೂ ಇದೆ.
ಇಲ್ಲಿ ವಯಸ್ಸಾಗಿರುವ ಕೆಲವು ಹಿರಿಯರಿಗೆ ದೊರಕಬೇಕಾಗಿರುವ ವೃದ್ಯಾಪ್ಯ ವೇತನ ಸಿಗುತ್ತಿಲ್ಲ. ಇದಕ್ಕೆ ಇಲ್ಲಿ ಪಿಂಚಣಿ ಮೇಳ ಒಂದನ್ನು ಹಮ್ಮಿಕೊಳ್ಳುವುದು ಅಗತ್ಯವಿದೆ. ಈ ಊರಿನ ಸುಮಾರು 30 ಜನ ಮಕ್ಕಳು ಸುಮಾರು 30 ಕಿ.ಮೀ. ದೂರದಲ್ಲಿ ಇರುವ ಕಕ್ಕಿಂಜೆ ಹಾಗೂ ಇನ್ನಿತರ ಕಡೆ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವರಿಗೆ ಹಾಸ್ಟೆಲ್ ಸೌಲಭ್ಯ ದೊರಕಿದೆ. ಸುಮಾರು 15 ಮಕ್ಕಳು ಪ್ರತಿನಿತ್ಯ ಜೀಪಿನಲ್ಲಿ ಈ ಅರಣ್ಯ ಮಾರ್ಗದಲ್ಲಿ ಸಾಗಿ ಶಾಲೆಗಳಿಗೆ ಹೋಗಿ ಬರುತ್ತಾರೆ.
ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗುವ ಅಗತ್ಯ ಬಿದ್ದಾಗ 108 ಕ್ಕೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಚಾರ್ಮಾಡಿ ರಸ್ತೆಯವರೆಗೂ ಬಂದು ನಿಲ್ಲುತ್ತದೆ. ಅಲ್ಲಿಗೆ ಹೋಗಲು ಸುಮಾರು 11 ಕಿ.ಮೀ. ದುರ್ಗಮ ಹಾದಿಯಲ್ಲಿಯೇ ರೋಗಿಯನ್ನು ಕರೆದೊಯ್ಯಬೇಕು. ಪುಟ್ಟ ಮಕ್ಕಳ ಬೆಳವಣಿಗೆಗೆ ಅಗತ್ಯವಿದ್ದ ಒಂದು ಅಂಗನವಾಡಿ ಹಿಂದೆ ಕಾರ್ಯ ನಿರ್ವಹಿಸುತ್ತಿತ್ತು. ಈಗ ಅದನ್ನು ಮುಚ್ಚಲಾಗಿದೆ.
ಸ್ಥಳೀಯ ಶಾಸಕರ ಪ್ರಯತ್ನದಿಂದ ಒಂದಷ್ಟು ಮನೆಗಳಿಗೆ ಸೋಲಾರ್ ದೀಪಗಳು ಬಂದಿದೆ. ಹಾಗೆಯೇ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲದ ಸೌಲಭ್ಯವು ಸಹ ಕೆಲವು ಕುಟುಂಬಗಳಿಗೆ ದೊರಕಿದೆ. ಆಶಾ ಕಾರ್ಯಕರ್ತೆಯರು ನಮ್ಮ ಊರಿಗೆ ಆಗಾಗ ಬರಬೇಕು ಎಂಬುದು ಇವರ ಬೇಡಿಕೆಯಾಗಿದೆ.
ಈಗ ಈ ಗ್ರಾಮಕ್ಕೆ ಅಗತ್ಯವಾಗಿ ಬೇಕಾಗಿರುವುದು ಒಂದು ಉತ್ತಮ ರಸ್ತೆ ಹಾಗೂ ಎರಡು ಕಡೆ ತುಂಬಿ ಹರಿಯುವ ಹಳ್ಳ ದಾಟಲು ಸ್ಥಳೀಯವಾಗಿ “ಸಂಕ’ ಎಂದು ಕರೆಯಲಾಗುವ ಎರಡು ಸೇತುವೆಗಳು. ನಾನು ಆ ಮುಗ್ಧ ಗ್ರಾಮಸ್ಥರ ಜತೆ ಸುಮಾರು ಎರಡು ಗಂಟೆ ಕಾಲ ಸಂವಾದ ನಡೆಸಿದಾಗ ಹೊರಬಂದ ವಿಚಾರಗಳಿವು.
ಅಲ್ಲಿ ನನಗೆ ಸಿಕ್ಕ ಎಲ್ಲರೂ ಹೇಳಿದ ಮಾತು ನಾವು ನಮ್ಮ ಈ ಊರನ್ನು ಬಿಟ್ಟು ಹೊರಗೆ ಹೋಗಲು ಸಿದ್ಧವಿಲ್ಲ ಎಂದು. ಬೆಂಗಳೂರಿನಲ್ಲಿ ಸುಮಾರು ವರ್ಷಗಳ ಕಾಲ ಕಾರ್ ಡ್ರೆçವಿಂಗ್ ಮಾಡಿಕೊಂಡಿದ್ದ ಓರ್ವರು ತನ್ನ ಊರಿನ ವಾತಾವರಣವೇ ಅತ್ಯಂತ ಆರೋಗ್ಯಕರ ಎಂದು ನಿರ್ಧರಿಸಿ, ತನ್ನ ಊರಿಗೆ ಮರಳಿ ಬಂದು ಇಲ್ಲಿಯೇ ಸಂತೋಷದಿಂದ ಇದ್ದಾರೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಇಲ್ಲಿನ ಒಬ್ಬರಿಗೂ ಯಾವುದೇ ತೊಂದರೆ ಆಗಲಿಲ್ಲ.
ಇಲ್ಲಿನ ಸಮುದಾಯ ಭವನದಲ್ಲಿ ಎಲ್ಲರಿಗೂ ಎರಡು ಬಾರಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿತ್ತು ಎಂದು ಈ ಗ್ರಾಮಸ್ಥರು ಸಂತಸದಿಂದ ಸ್ಮರಿಸಿಕೊಳ್ಳುತ್ತಾರೆ. ಊರಿನಲ್ಲಿ ನೆಟ್‌ವರ್ಕ್ ಇಲ್ಲದೆ ಇರುವುದರಿಂದ, ಹೋಗಿ ಬರಲು ರಸ್ತೆ ಸರಿ ಇಲ್ಲದೆ ಇರುವುದರಿಂದ, ಇಲ್ಲಿನ ತರುಣರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಅಳಲೂ ಉಂಟು.
ನೂರಕ್ಕೆ ನೂರು ಮತದಾನ ಮಾಡಿ ಇಡೀ ರಾಜ್ಯಕ್ಕೆ ಒಂದು ಸಂದೇಶ ಕಳಿಸಿರುವ ಆ ಗ್ರಾಮಸ್ಥರಿಗೆ ಶಾಲು ಹೊದಿಸಿ ಗೌರವಿಸಿದ ಸಂತಸ ನನ್ನದು.
ಒಟ್ಟಿನಲ್ಲಿ ತಮ್ಮ ಊರಿನ ಬಗ್ಗೆ, ತಮ್ಮ ಊರಿನ ವಾತಾವರಣದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಹೆಮ್ಮೆ ಇಟ್ಟುಕೊಂಡಿರುವ ನೂರಕ್ಕೆ ನೂರರಷ್ಟು ಮತದಾನ ಮಾಡಿ ಇಡೀ ರಾಜ್ಯದ ಗಮನ ಸೆಳೆದಿರುವ ಈ ಗ್ರಾಮದ ನಾಗರಿಕರಿಗೆ ನಾವು ನ್ಯಾಯ ಒದಗಿಸಬೇಕಾಗಿದೆ. ಸ್ಥಳೀಯ ಶಾಸಕರೊಂದಿಗೂ ಚರ್ಚಿಸಿದ್ದೇನೆ. ಅವರೊಂದಿಗೆ ಸೇರಿಕೊಂಡು ನಾನು ಈ ಕುರಿತು ಸೂಕ್ತ ಮಾರ್ಗದ ಮೂಲಕ ಇವರಿಗೆ ನೆರವು ನೀಡಲು ತೀರ್ಮಾನಿಸಿ ನನಗೆ ಬೇಕಾದ ಕೆಲವು ಮಾಹಿತಿಗಳನ್ನು ಪತ್ರದ ಮೂಲಕ ನೀಡಬೇಕೆಂದು ತಿಳಿಸಿ ಬಂದಿದ್ದೇನೆ. ಆ ನಿಟ್ಟಿನಲ್ಲಿ ನಾನು ಹೆಜ್ಜೆ ಹಾಕುತ್ತೇನೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೌರವ ಹೆಚ್ಚಿಸುವ ಒಂದು ಖಚಿತ ಕ್ರಮವಾಗಬೇಕು.
ಮರೆಯುವ ಮುನ್ನ: ಬಾಂಜಾರ ಮಲೆಯಿಂದ ಹೊರಟು ಬರುವಾಗ ಅಲ್ಲೊಂದು ವೇದಿಕೆ ರೀತಿ ಇದ್ದ ಕಟ್ಟೆಯೊಂದನ್ನು ನೋಡಿದೆ. ಅಲ್ಲಿನ ಜನ ಅದನ್ನು “ಡಿಸಿ ಕಟ್ಟೆ’ ಎಂದು ಕರೆಯುತ್ತಾರೆ. ಹಿಂದೊಮ್ಮೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಬ್ಬರು ಈ ಗ್ರಾಮಕ್ಕೆ ಬರುತ್ತಾರೆ ಎಂದು ಮಾಹಿತಿ ಬಂದ ತತ್‌ಕ್ಷಣ ಈ ಮುಗ್ಧ ಗ್ರಾಮಸ್ಥರು ಸಂಭ್ರಮದಿಂದ ಶ್ರಮದಾನ ಮೂಲಕ ಈ ಕಟ್ಟೆಯನ್ನು ನಿರ್ಮಿಸಿದರಂತೆ. ಆದರೆ ಆ ಡಿಸಿ ಬರಲಿಲ್ಲ! ಡಿಸಿ ಕಟ್ಟೆ ಮಾತ್ರ ಉಳಿದಿದೆ.
ಎಸ್. ಸುರೇಶ್ ಕುಮಾರ್ ಮಾಜಿ ಸಚಿವ, ಶಾಸಕ