Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಇದರಲ್ಲಿ ಭರಪೂರ ಯಶಸ್ಸು ಸಾಧಿಸಿತು. 3 ವಿಕೆಟಿಗೆ 263 ರನ್ ಪೇರಿಸಿತು. ರೂಟ್ 128 ರನ್ ಗಳಿಸಿ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. ದಿನದಾಟದ ಮುಕ್ತಾಯಕ್ಕೆ 3 ಎಸೆತ ಉಳಿದಿರುವಾಗ ಆರಂಭಕಾರ ಡೊಮಿನಿಕ್ ಸಿಬ್ಲಿ (87) ಅವರ ವಿಕೆಟ್ ಹಾರಿಸುವ ಮೂಲಕ ಭಾರತ ನಿಟ್ಟುಸಿರೆಳೆಯಿತು. ಈ ವಿಕೆಟ್ ಬುಮ್ರಾ ಪಾಲಾಯಿತು. ಇದಕ್ಕೂ ಮೊದಲು ಡೇನಿಯಲ್ ಲಾರೆನ್ಸ್ ಅವರನ್ನು ಶೂನ್ಯಕ್ಕೆ ಕೆಡವಿದ್ದರು. ತವರಲ್ಲಿ ಮೊದಲ ಟೆಸ್ಟ್ ಆಡುತ್ತಿದ್ದ ಬುಮ್ರಾ 40 ರನ್ನಿತ್ತು 2 ವಿಕೆಟ್ ಕಿತ್ತರು. ಆರಂಭಿಕರನ್ನು ಬೇರ್ಪಡಿಸಿದ ಹೆಗ್ಗಳಿಕೆ ಅಶ್ವಿನ್ ಪಾಲಾಯಿತು.
26ನೇ ಓವರಿನಲ್ಲಿ ಬ್ಯಾಟ್ ಹಿಡಿದು ಬಂದ ಜೋ ರೂಟ್ ತಮ್ಮ ನೂರನೇ ಟೆಸ್ಟ್‌ನಲ್ಲಿ ನೂರರಾಟ ಆಡುವ ಮೂಲಕ ಒಂದರ ಮೇಲೊಂದರಂತೆ ದಾಖಲೆಗಳನ್ನು ಪೇರಿಸುತ್ತ ಹೋದರು. ಲಂಕೆಯಲ್ಲಿ ತೋರ್ಪಡಿಸಿದ ಉಜ್ವಲ ಬ್ಯಾಟಿಂಗ್ ಫಾರ್ಮ್ ಅನ್ನು ಭಾರತದಲ್ಲೂ ಮುಂದುವರಿಸಿದರು. ಇದು ಅವರ ಹ್ಯಾಟ್ರಿಕ್ ಶತಕ ಸಾಧನೆಯಾಗಿದೆ. ರೂಟ್ ಲಂಕೆಯಲ್ಲಿ 228 ಹಾಗೂ 186 ರನ್ ಬಾರಿಸಿ ವಿಜೃಂಭಿಸಿದ್ದರು. ಈಗಾಗಲೇ 197 ಎಸೆತ ಎದುರಿಸಿರುವ ರೂಟ್, 14 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದಾರೆ.
Related Articles
ಇಂಗ್ಲೆಂಡಿನ ಆರಂಭಿಕ ಜೋಡಿಯಾದ ರೋರಿ ಬರ್ನ್ಸ್ -ಡೊಮಿನಿಕ್ ಸಿಬ್ಲಿ ಮೇಲೆ ಹೆಚ್ಚಿನ ಭರವಸೆ ಇರಲಿಲ್ಲ. ಕಳೆದ ಲಂಕಾ ಪ್ರವಾಸದಲ್ಲಿ ಇಬ್ಬರೂ ಮಂಕಾಗಿದ್ದರು. ಆದರೆ ಇಲ್ಲಿ 24ನೇ ಓವರ್ ತನಕ ಕ್ರೀಸ್ ಆಕ್ರಮಿಸಿ, ಚೆನ್ನೈ ಟ್ರ್ಯಾಕ್‌ನ ಗುಟ್ಟು ರಟ್ಟು ಮಾಡಿದರು. ಇದು ಬ್ಯಾಟಿಂಗಿಗೆ ಯೋಗ್ಯವಾಗಿದ್ದು, ಎಚ್ಚರಿಕೆಯಿಂದ ಆಡಿದರೆ ದೊಡ್ಡ ಮೊತ್ತ ಗಳಿಸಬಹುದೆಂಬ ಸೂಚನೆ ರವಾನಿಸಿದರು.
Advertisement
ಬರ್ನ್ಸ್ 60 ಎಸೆತಗಳಿಂದ 33 ರನ್ ಹೊಡೆದರೆ (2 ಬೌಂಡರಿ), 3ನೇ ಶತಕದ ಹಾದಿಯಲ್ಲಿದ್ದ ಸಿಬ್ಲಿ 286 ಎಸೆತಗಳಿಂದ 87 ರನ್ ಮಾಡಿದರು (12 ಬೌಂಡರಿ). ಬುಮ್ರಾಗೆ ತವರಿನ ಮೊದಲ ಎಸೆತದಲ್ಲೇ ವಿಕೆಟ್ ಸಿಗಬೇಕಿತ್ತು. ಆದರೆ ಬರ್ನ್ಸ್ ನೀಡಿದ ಕ್ಯಾಚನ್ನು ಪಂತ್ ಕೈಚೆಲ್ಲಿದರು.
ಇಂಗ್ಲೆಂಡ್ ಇನ್ನೂ ಆಳವಾದ ಬ್ಯಾಟಿಂಗ್ ಸರದಿಯನ್ನು ಹೊಂದಿದೆ. ರೂಟ್ ರನ್ ಹಸಿವು ಇನ್ನೂ ಇಂಗಿಲ್ಲ. ಜತೆಗೆ ಸ್ಟೋಕ್ಸ್, ಪೋಪ್, ಬಟ್ಲರ್ ಬ್ಯಾಟಿಂಗಿಗೆ ಬರಬೇಕಿದೆ. ಸ್ಕೋರ್ 450ರ ಗಡಿ ದಾಟಿದರೆ ಅಚ್ಚರಿ ಇಲ್ಲ. ಸದ್ಯ ಚೆನ್ನೈ ಪಿಚ್ ಯಾವುದೇ ರೀತಿಯ ಬೌಲಿಂಗಿಗೂ ನೆರವು ನೀಡುತ್ತಿಲ್ಲ. 3ನೇ ದಿನದಿಂದ “ಸ್ಪಿನ್ ಅಟ್ಯಾಕ್’ ಆದೀತು.
ಕಪ್ಪುಪಟ್ಟಿ ಧರಿಸಿ ಆಡಿದ ಆಂಗ್ಲರುಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು. ಇತ್ತೀಚೆಗೆ ನಿಧನರಾದ ಕ್ಯಾಪ್ಟನ್ ಸರ್ ಟಾಮ್ ಮೂರ್ ಅವರ ನಿಧನದ ಶೋಕಾಚರಣೆ ಸಂಕೇತವಾಗಿ ಎಲ್ಲರೂ ಕಪ್ಪು ಬ್ಯಾಂಡ್ ಧರಿಸಿದ್ದು ಕಂಡುಬಂತು. “ಮಾಜಿ ಯೋಧರಾಗಿದ್ದ ಟಾಮ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಕೊರೊನಾ ಮಾರಿ ವಿರುದ್ಧ ಹೋರಾಟ ನಡೆಸುತ್ತ, ನಿಧಿ ಸಂಗ್ರಹದಲ್ಲಿ ತೊಡಗಿದ್ದರು. ಕಳೆದ ವಾರ ತಮ್ಮ ನೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅನಂತರ ಕೊವಿಡ್-19 ಕಾರಣದಿಂದಲೇ ಅಸುನೀಗಿದ್ದರು. ಅವರ ಗೌರವಾರ್ಥ ನಮ್ಮ ಆಟಗಾರರು ಕಪ್ಪುಪಟ್ಟಿ ಧರಿಸಿ ಮೈದಾನಕ್ಕಿಳಿದರು’ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಸ್ಕೋರ್ ಪಟ್ಟಿ
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್
ರೋರಿ ಬರ್ನ್ಸ್ ಸಿ ಪಂತ್ ಬಿ ಅಶ್ವಿನ್ 33
ಡೊಮಿನಿಕ್ ಸಿಬ್ಲಿ ಎಲ್‌ಬಿಡಬ್ಲ್ಯು ಬಿ ಬುಮ್ರಾ 87
ಡೇನಿಲ್ ಲಾರೆನ್ಸ್ ಎಲ್‌ಬಿಡಬ್ಲ್ಯು ಬಿ ಬುಮ್ರಾ 0
ಜೋ ರೂಟ್ ಬ್ಯಾಟಿಂಗ್ 128
ಇತರ 15
ಒಟ್ಟು (3 ವಿಕೆಟಿಗೆ) 263
ವಿಕೆಟ್ ಪತನ: 1-63, 2-63, 3-263.
ಬೌಲಿಂಗ್
ಇಶಾಂತ್ ಶರ್ಮ 15-3-27-0
ಜಸ್‌ಪ್ರೀತ್ ಬುಮ್ರಾ 18.3-2-40-2
ಆರ್. ಅಶ್ವಿನ್ 24-2-68-1
ಶಾಬಾಜ್ ನದೀಂ 20-3-69-0
ವಾಷಿಂಗ್ಟನ್ ಸುಂದರ್ 12-0-55-0