ಹೊಸದಿಲ್ಲಿ: ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ಭಾರತೀಯ ರೈಲ್ವೇ ಶೇ.100ರಷ್ಟು ವಿದ್ಯುದೀಕರಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಉದ್ಯಮ ಒಕ್ಕೂಟದ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ‘ಒಂದು ಸೂರ್ಯ, ಒಂದು ವಿಶ್ವ, ಒಂದು ವಿದ್ಯುತ್ ಜಾಲ’ ಎಂಬ ದೃಷ್ಟಿಕೋನದಡಿ ಕೆಲಸ ಮಾಡಲಾಗುತ್ತಿದ್ದು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ಭಾರತೀಯ ರೈಲ್ವೇ ಶೇ.100ರಷ್ಟು ವಿದ್ಯುದ್ದೀಕರಣಗೊಳ್ಳಲಿದೆ. 2030ರ ವೇಳೆಗೆ ರೈಲ್ವೇಯನ್ನು ಸಂಪೂರ್ಣ ಇಂಗಾಲ ಹೊರಸೂಸುವಿಕೆ ಮುಕ್ತ ಮಾಡಲಾಗುವುದು.
ಆ ಮೂಲಕ ಅತಿ ದೊಡ್ಡ ಶುದ್ಧ ರೈಲ್ವೇ ಜಾಲ ಹೊಂದಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಮ್ಮೆಗೆ ನಾವು ಪಾತ್ರರಾಗಲಿದ್ದೇವೆ ಎಂದರು.
2030ರ ವೇಳೆಗೆ ಭಾರತೀಯ ರೈಲ್ವೇಯನ್ನು ಹಸಿರು ರೈಲ್ವೇಯಾಗಿ ಪರಿವರ್ತಿಸಲು ರೈಲ್ವೇ ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ. ರೈಲ್ವೇ ವಿದ್ಯುದ್ದೀಕರಣ, ಬೋಗಿಗಳಲ್ಲಿ ಜೈವಿಕ ಶೌಚಾಲಯ ಅಳವಡಿಕೆ ಸೇರಿದಂತೆ ಹಲವು ಪರಿಸರಸ್ನೇಹಿ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.