Advertisement

ಜಲ ಸಂರಕ್ಷಣೆಗಾಗಿ100 ದಿನಗಳ ಜಲಶಕ್ತಿ ಅಭಿಯಾನ

09:17 AM Apr 14, 2021 | Team Udayavani |

ಉಡುಪಿ: ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಸರಕಾರವು ಜಲಶಕ್ತಿ ಅಭಿಯಾನ ಎಂಬ ಬಹುದೊಡ್ಡ ಯೋಜನೆಯನ್ನು ರಾಷ್ಟ್ರಾದ್ಯಂತ ಅನುಷ್ಠಾನಗೊಳಿಸಿದೆ.

Advertisement

ದೇಶದ ಗ್ರಾಮೀಣ ಪ್ರದೇಶಗಳು ಎದುರಿಸುತ್ತಿರುವ ಜಲಮೂಲಗಳ ಕೊರತೆ, ಅಂರ್ತಜಲ ಸಮಸ್ಯೆ  ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರು ಹಾಗೂ ಕುಡಿಯುವ ನೀರಿನ  ಕೊರತೆಯನ್ನು ನಿವಾರಿಸಿ ಈ ಮೂಲಕ  ಕೃಷಿ ಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸುವುದು ಗುರಿಯಾಗಿದೆ.

ಕೇಂದ್ರ ಸರಕಾರವು ಮಾ.22ರಿಂದ ನ.30ರ ವರೆಗೆ ಜಲಶಕ್ತಿ ಅಭಿಯಾನ- ಕ್ಯಾಚ್‌ ದಿ ರೇನ್‌ ಅಭಿಯಾನವನ್ನು  ಹಮ್ಮಿಕೊಳ್ಳಲು ನಿರ್ದೇಶನ ನೀಡಿದೆ. ಪ್ರಧಾನಿ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿ ಮುಂಗಾರು ಪೂರ್ವದ 100 ದಿನ ಅವಧಿಯಲ್ಲಿ ಪ್ರತೀ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.

ನರೇಗಾದಡಿ ಅವಕಾಶ :

ಮಳೆ ನೀರು ಸಂರಕ್ಷಣೆಗೆ ನರೇಗಾ ಯೋಜನೆ ಯಡಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಂಡು ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿ, ನೀರು ಹರಿದು ಹೋಗುವ ನಾಲೆ/ ಕಾಲುವೆಗಳ ಪುನಶ್ಚೇತನ, ಹೊಸ ಕೆರೆ, ಗೋಕಟ್ಟೆಗಳ ನಿರ್ಮಾಣ, ಕಿಂಡಿ ಆಣೆಕಟ್ಟು,ಬೋರ್‌ವೆಲ್‌ ರಿಚಾರ್ಜ್‌, ಕಟ್ಟಡಗಳಿಗೆ ಮಳೆ ನೀರುಕೊಯ್ಲು, ಅರಣ್ಯೀಕರಣ ಕಾಮಗಾರಿ ಇತ್ಯಾದಿ ಸಮುದಾಯ ಕಾರ್ಯಕ್ರಮಗಳನ್ನು, ನೀರಾವರಿ ಬಾವಿ ನಿರ್ಮಾಣ, ಸೋಕ್‌ ಪಿಟ್‌ಗಳ ನಿರ್ಮಾಣ, ಬದುಗಳ ನಿರ್ಮಾಣ, ಕೃಷಿ ಹೊಂಡ ಮೊದಲಾದ ವೈಯಕ್ತಿಕ ಕಾರ್ಯಕ್ರಮಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Advertisement

ಕೂಲಿ ದರ ಹೆಚ್ಚಳ :

ನರೇಗಾ ಕಾರ್ಯಕ್ರಮದಡಿ ಕೂಲಿದರವನ್ನು 275 ರೂ.ಗಳಿಂದ 289ಕ್ಕೆ ಹೆಚ್ಚಿಸಲಾಗಿದ್ದು, ವರ್ಷಕ್ಕೆ ಪ್ರತೀ ಕುಟುಂಬಕ್ಕೆ 100 ದಿನಗಳು ಉದ್ಯೋಗ ಅಭಿಯಾನ ಜಾರಿಯಲ್ಲಿದೆ. ಉದ್ಯೋಗ ಚೀಟಿ ಹೊಂದದ ಕುಟುಂಬಗಳು ಗ್ರಾ.ಪಂ. ಸಂಪರ್ಕಿಸಿ ಉದ್ಯೋಗ ಚೀಟಿ ಪಡೆದು ಗ್ರಾ.ಪಂ.ನಿಂದ ಉದ್ಯೋಗ ಪಡೆಯಬಹುದಾಗಿದೆ.

141 ಕೆರೆ, 160 ತೋಡು, 20 ಕಿಂಡಿ ಅಣೆಕಟ್ಟು… :

ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದ ಅಂಗವಾಗಿ ಪ್ರತೀ ಗ್ರಾಮಕ್ಕೆ ಕನಿಷ್ಠ ಒಂದು ಕೆರೆಯನ್ನು ಗುರುತಿಸಿ ಅದರ ಸಮಗ್ರ ಅಭಿವೃದ್ಧಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಒಟ್ಟು 141 ಕೆರೆ, 160 ಕಾಲುವೆ/ ತೋಡು ಹೂಳೆತ್ತುವುದು, 20 ಕಿಂಡಿ ಆಣೆಕಟ್ಟು ನಿರ್ಮಾಣ, 50 ಬೋರ್‌ವೆಲ್‌ ರಿಚಾರ್ಜ್‌, 1,455 ನೀರಾವರಿ ಬಾವಿ ನಿರ್ಮಾಣದ ಗುರಿ ಹೊಂದಲಾಗಿದೆ.

ಜಿಲ್ಲೆಯ  ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಹಾಗೂ ನರೇಗಾ ಯೋಜನೆ ಕಾರ್ಯಕ್ರಮ ಹೊರತುಪಡಿಸಿ ಸಹ ಅಂತರ್ಜಲ ಮರುಪೂರಣಗೊಳಿಸುವ ಮೇಲಿನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವಿವಿಧ ಯೋಜನೆಗಳನ್ನು ಸ್ವಂತವಾಗಿಯೂ  ಮಾಡಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿದೆ.

ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಾಹಿತಿಗಾಗಿ 0820-2574945 ಅಥವಾ ತಮ್ಮ ಸಮೀಪದ ಗ್ರಾ.ಪಂ. ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next