ರಾಯಚೂರು: ರೈತ ವಿರೋಧಿ ಮಸೂದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ 100 ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಿದರು.
ನಗರದ ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಜಮಾಯಿಸಿದ ಸಂಘಟನೆ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರಾಳ ಕಾಯ್ದೆಗಳಾದ ಕೃಷಿ ಮಸೂದೆ, ವಿದ್ಯುತ್ ಮಸೂದೆ 2020, ಎಪಿಎಂಸಿ ತಿದ್ದುಪಡಿ ಕಾಯ್ದೆ ಅಗತ್ಯ ವಸ್ತುಗಳ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ಹೋರಾಟ ನಡೆಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ವಿವಿಧ ರೈತ ಸಂಘಟನೆಗಳು, ಕಾರ್ಮಿಕ, ದಲಿತ ಮಹಿಳಾ, ಅಲ್ಪಸಂಖ್ಯಾತರ ವಿದ್ಯಾರ್ಥಿ ಯುವಜನ ಸಂಘಟನೆಗಳ ಜಂಟಿ ಸಂಯುಕ್ತ ಕಿಸಾನ್ ಸಂಘರ್ಷ ಮಂಚ್ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಭಟನೆ ನಡೆಯುತ್ತಿದೆ. ಆದರೂ ಕೇಂದ್ರ ಸರ್ಕಾರ ತಮ್ಮ ಕಾರ್ಪೋರೇಟ್ ಕಂಪನಿಗಳ ಪರ ಆಡಳಿತದಿಂದ ಹಿಂದೆ ಸರಿಯದೇ ತನ್ನ ಮೊಂಡು ಹಠ ಮುಂದುವರಿಸಿರುವುದು ಖಂಡನೀಯ ಎಂದು ದೂರಿದರು.
ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತು ರೈತ ಹೋರಾಟಕ್ಕೆ ಮಣಿದು ಮಸೂದೆಗಳನ್ನು ಹಿಂಪಡೆಯಬೇಕು. ಬಂಡವಾಳಶಾಹಿ ಪರ ಆಡಳಿತ ನಡೆಸದೆ ರೈತ ಪರ ನಿರ್ಧಾರ ಕೈಗೊಳ್ಳಲಿ. ರೈತ ಸಂಘಟನೆಗಳ ಜತೆ ಚರ್ಚೆ ನಡೆಸಿ ರೈತಸ್ನೇಹಿ ಮಸೂದೆಗಳ ರಚಿಸಲಿ ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಕೆ.ಜಿ. ವೀರೇಶ್, ಎಸ್.ಮಾರೆಪ್ಪ ವಕೀಲರು, ಬಸವರಾಜ ಗಾರಲದಿನ್ನಿ, ಆಂಜಿನಯ್ಯ ಕುರುಬದೊಡ್ಡ, ಶ್ರೀನಿವಾಸ ಕಲವಲದೊಡ್ಡಿ,
ಡಿ.ಎಸ್. ಶರಣಬಸವ, ಈ.ರಂಗನಗೌಡ, ಶೇಕ್ಷಾಖಾದ್ರಿ, ಶ್ರೀನಿವಾಸ ಕೊಪ್ಪರ ಸೇರಿ ಇತರರು ಪಾಲ್ಗೊಂಡಿದ್ದರು.