ಭಾಲ್ಕಿ: ಮರಾಠಾ ನಿಗಮ ಮಂಡಳಿಗೆ ಸರ್ಕಾರ 100 ಕೋಟಿ ರೂ. ಅನುದಾನ ನೀಡಿದೆ ಎಂದು ಮರಾಠಾ ನಿಗಮ ಮಂಡಳಿ ಅಧ್ಯಕ್ಷ ಮಾರುತಿರಾವ್ ಮುಳೆ ತಿಳಿಸಿದರು.
ಪಟ್ಟಣದ ಪುರಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠಿಗರ ಬಹುದಿನಗಳ ಆಸೆಯಂತೆ ರಾಜ್ಯ ಬಿಜೆಪಿ ಸರ್ಕಾರ ಮರಾಠಾ ನಿಗಮ ಸ್ಥಾಪಿಸಿ 100 ಕೋಟಿ ಅನುದಾನ ನೀಡಿರುವುದು ಸಮಾಜಕ್ಕೆ ಸಂದ ಗೌರವ. ಜು.19ರಂದು ಬೆಂಗಳೂರಿನಲ್ಲಿ ನಡೆದ ನಿಗಮ ಮಂಡಳಿ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಸುಮಾರು 25 ಸಾವಿರ ಮರಾಠಿಗರು ಸೇರಿದ್ದರು. ನಿಗಮ ಮಂಡಳಿಗೆ ದೊರೆತ 100 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ಸಿದ್ಧವಾಗಿದ್ದು, ಎಲ್ಲ ಅನುದಾನ ಮರಾಠಿಗರ ಏಳ್ಗೆಗಾಗಿ ಖರ್ಚು ಮಾಡಲಾಗುವುದು ಎಂದರು.
ಪ್ರಥಮವಾಗಿ ಶ್ರೀ ಶಾಹಜಿ ರಾಜೆ ಸಮೃದ್ಧಿ ಯೋಜನೆಗೆ 18 ಲಕ್ಷ ರೂ. ಒದಗಿಸಲಾಗಿದ್ದು, ಅವುಗಳಲ್ಲಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 2 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಿ, ಅದರಲ್ಲಿ ಶೇ.12 ಸಬ್ಸಿಡಿ ನೀಡಿ ಉತ್ತೇಜಿಸಲಾಗುವುದು. ಅದರಂತೆ ಗಂಗಾ ಕಲ್ಯಾಣ ಯೋಜನೆ ಮಾದರಿಯಲ್ಲಿ ಜೀಜಾವು ಜಲಭಾಗ್ಯ ಯೋಜನೆ ರೂಪಿಸಲಾಗಿದ್ದು, 1.8 ಕೋಟಿ ರೂ. ಈ ಯೋಜನೆಗೆ ಬಳಸಲಾಗಿದೆ. ಅವುಗಳಲ್ಲಿ ಪ್ರತಿ ಫಲಾನುಭವಿಗಳಿಗೆ 2 ಲಕ್ಷ ರೂ. ಸಾಲ ಮಂಜೂರು ಮಾಡಿ 1.50 ಲಕ್ಷದವರೆಗೆ ಸಬ್ಸಿಡಿ ಹಣ ನೀಡಲಾಗುವುದು ಎಂದರು.
ಮರಾಠಾ ಸಮುದಾಯದ ವ್ಯಕ್ತಿಗಳಿಗೆ ಅಮೃತ್ ಮುನ್ನಾಡೆ ಯೋಜನೆ ಜಾರಿ ಮಾಡಿ, ಈ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 2.5 ಲಕ್ಷ ರೂ. ಅನುದಾನ ನೀಡಲಾಗುವುದು. 80 ಲಕ್ಷ ರೂ. ಚೈತನ್ಯ ಸ್ವ ಉದ್ಯೋಗ ಯೋಜನೆಯಲ್ಲಿ ಪ್ರತಿಯೊಬ್ಬ ಫಲಾನುಭವಿಗಳಿಗೆ 1 ಲಕ್ಷ ರೂ. ನೀಡಲಾಗುವುದು. ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಶಾವು ಮಹಾರಾಜ ವಿದೇಶ ಅಭ್ಯಾಸ ಯೋಜನೆ ಸೇರಿದಂತೆ ಅನೇಕ ಯೋಜನೆ ರೂಪಿಸಿ ಸರ್ಕಾರ ಬಿಡುಗಡೆ ಮಾಡಿದ 100 ಕೋಟಿ ಅನುದಾನ ಸರಿಯಾದ ಮರಾಠಾ ಫಲಾನುಭವಿಗಳಿಗೆ ಸಿಗುವಂತೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಾರ್ಧನ ಬಿರಾದಾರ, ವೆಂಕಟರಾವ್ ಮೇಂದೆ, ಬಾಬುರಾವ್ ಕಾರಬಾರಿ, ವೆಂಕಟರಾವ್ ಬಿರಾದಾರ ಮಾವಿನಹಳ್ಳಿ ಇದ್ದರು.