Advertisement

ಹಾರು ಬೂದಿ ಹೊಂಡಕ್ಕಾಗಿ 100 ಎಕರೆ ಭೂ ಸ್ವಾಧೀನ? 

06:28 AM Nov 09, 2018 | Team Udayavani |

ರಾಯಚೂರು: ಸಮೀಪದ ಯರಮರಸ್‌ ಸೂಪರ್‌ ಕ್ರಿಟಿಕಲ್‌ ಥರ್ಮಲ್‌ ಪವರ್‌ ಸ್ಟೇಶನ್‌ಗೆ (ವೈಟಿಪಿಎಸ್‌) ಪ್ರತ್ಯೇಕ ಹಾರುಬೂದಿ ಹೊಂಡ ನಿರ್ಮಿಸಲು 100 ಎಕರೆ ಭೂ ಸ್ವಾಧೀನಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. 1,600 ಮೆಗಾವ್ಯಾಟ್‌ ಸಾಮರ್ಥ್ಯದ ಈ ಕೇಂದ್ರದಲ್ಲಿ ಈಗ ಕೇವಲ ಒಂದು ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಅಗತ್ಯನುಸಾರ ಮಾತ್ರ ವಿದ್ಯುತ್‌ ಉತ್ಪಾದಿಸುತ್ತಿದ್ದು, ಹಾರುಬೂದಿ ಅಷ್ಟಾಗಿ ಉತ್ಪಾದನೆ ಆಗುತ್ತಿಲ್ಲ. ಆದರೆ, ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿದ್ದೇ ಆದಲ್ಲಿ ಬೂದಿ
ವಿಲೇವಾರಿಗೆ ಪ್ರತ್ಯೇಕ ಹೊಂಡ ಬೇಕೇ ಬೇಕು. ಈ ಸಮಸ್ಯೆ ಅರಿತ ಅಧಿಕಾರಿಗಳು ವಡೂರು, ಏಗನೂರು, ಸಂಕನೂರು ಸೇರಿ ವಿವಿಧ ಭಾಗಗಳ ರೈತರೊಂದಿಗೆ ಮಾತುಕತೆ ನಡೆಸಿದ್ದು, 100 ಎಕರೆ ಜಮೀನು ನೀಡಲು ರೈತರೊಂದಿಗೆ ಒಪ್ಪಿಗೆ ಪಡೆದಿರುವ ವಿಚಾರ ಗೊತ್ತಾಗಿದೆ. ಆದರೆ, ಈ ಬಾರಿ ಸರ್ಕಾರ ಮುಂಜಾಗ್ರತೆ ವಹಿಸಿದ್ದು, ಷರತ್ತುಗಳ ಆಧಾರದಡಿ ಭೂಮಿ ಖರೀದಿಗೆ ಚಿಂತನೆ ನಡೆಸಿದೆ. ಈಗಾಗಲೇ ಸುಮಾರು 1,130 ಎಕರೆಗೂ ಅ ಧಿಕ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಘಟಕ ಸ್ಥಾಪಿಸಿರುವ ಸರ್ಕಾರ ಎಕರೆಗೆ ಇಂತಿಷ್ಟು ಎಂದು ಪರಿಹಾರ ನೀಡಿತ್ತು. ಅದರ ಜತೆಗೆ ಕುಟುಂಬಕ್ಕೆ ಒಂದು ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಕುಟುಂಬಗಳು ಬೇರೆಯಾದರೂ ಜಮೀನಿನ ಪಹಣಿಯಲ್ಲಿ ಒಂದೇ ಹೆಸರಿದೆ ಎಂಬ ಕಾರಣಕ್ಕೆ ಸಾಕಷ್ಟು ಜನರಿಗೆ ಉದ್ಯೋಗ ಸಿಕ್ಕಿರಲಿಲ್ಲ. ಹೀಗಾಗಿ ಎಲ್ಲರಿಗೂ ಉದ್ಯೋಗ ನೀಡಬೇಕೆಂಬ ಬೇಡಿಕೆಯೊಂದಿಗೆ ಇಂದಿಗೂ ಹೋರಾಟಗಳು ನಡೆಯುತ್ತಲೇ ಇವೆ.
ಇದರಿಂದ ಎಚ್ಚೆತ್ತುಕೊಂಡ ಕೆಪಿಸಿ, ಈ ಬಾರಿ ಜಮೀನು ನೀಡಿದವರಿಗೆ ಪರಿಹಾರ ಮಾತ್ರ ನೀಡಲಿದ್ದು, ಉದ್ಯೋಗ ನೀಡುವುದಿಲ್ಲ ಎಂಬ ಷರತ್ತು ಹಾಕಿದೆ ಎಂದು ತಿಳಿದು ಬಂದಿದೆ.

Advertisement

ಆರ್‌ಟಿಪಿಎಸ್‌ಗೆ ರವಾನೆ: ಒಂದು ಮೆಟ್ರಿಕ್‌ ಟನ್‌ ಕಲ್ಲಿದ್ದಲು ಉರಿದರೆ ಅದರಲ್ಲಿ ಶೇ.30ರಷ್ಟು ಹಾರುಬೂದಿ, ಶೇ.30ರಷ್ಟು ಒದ್ದೆಬೂದಿ ಉತ್ಪಾದನೆ ಆಗಲಿದೆ. ಇದರಿಂದ ನಿತ್ಯ ಸಾವಿರಾರು ಟನ್‌ ಹಾರುಬೂದಿ ಉತ್ಪಾದನೆ ಆಗುತ್ತಿದೆ. ಆದರೆ, ವೈಟಿಪಿಎಸ್‌ನಲ್ಲಿ ಹಾರುಬೂದಿ ಹೊಂಡ ನಿರ್ಮಿಸದ ಕಾರಣ ಆರ್‌ಟಿಪಿಎಸ್‌ 2ನೇ ಹೊಂಡದಲ್ಲಿಯೇ ವಿಲೇವಾರಿ ಮಾಡಲಾಗುತ್ತಿದೆ. ವೈಟಪಿಎಸ್‌ನ
ಎರಡು ಘಟಕಗಳಿಂದ ಆರು ಪೈಪ್‌ಗ್ಳ ಮೂಲಕ ಒದ್ದೆಬೂದಿ ಪೂರೈಸಲಾಗುತ್ತಿದೆ. ಆದರೆ, ಎರಡೂ ಘಟಕಗಳು ಕಾರ್ಯಾರಂಭ ಮಾಡಿದರೆ ಸಾಕಷ್ಟು ಪ್ರಮಾಣದಲ್ಲಿ ಹಾರುಬೂದಿ ಉತ್ಪಾದನೆ ಆಗುವುದರಿಂದ ಪ್ರತ್ಯೇಕ ಹೊಂಡ ನಿರ್ಮಾಣ ಮಾಡುವುದು ಅನಿವಾರ್ಯವಾಗಲಿದೆ.

ಹಾರುಬೂದಿಗೆ ಬೇಡಿಕೆ: ಹಾರುಬೂದಿಗೂ ಸಾಕಷ್ಟು ಬೇಡಿಕೆ ಇದೆ. ಕೆಲ ಸಿಮೆಂಟ್‌ ಕಂಪನಿಗಳು ಖರೀದಿಸುತ್ತವೆ. ಅಲ್ಲದೇ, ಸ್ಥಳೀಯವಾಗಿ 100 ಕಿ. ಮೀ. ವ್ಯಾಪ್ತಿಯಲ್ಲಿ ರಿಯಾಯಿತಿ ದರದಲ್ಲಿ ನೀಡಬೇಕೆಂಬ ನಿಯಮವೂ ಇದೆ. ಈಗಾಗಲೇ ಒಂಭತ್ತು ಕಂಪನಿಗಳು ಹಾರುಬೂದಿ ಖರೀದಿಗೆ ಮುಂದಾಗಿದ್ದು, ಅದರಲ್ಲಿ ಏಳು ಈಗಾಗಲೇ ತುಂಬಿವೆ. ಒದ್ದೆ ಬೂದಿಯನ್ನು ವಿವಿಧ ಅಭಿವೃದಿಟಛಿ
ಕೆಲಸಗಳಿಗೆ ಬಳಸಬಹುದಾಗಿದ್ದು, ಆ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಈಗಾಗಲೇ 100 ಎಕರೆ ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ವೈಟಿಪಿಎಸ್‌ 2ನೇ ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಬೂದಿಯನ್ನು
ಆರ್‌ಟಿಪಿಎಸ್‌ ಹೊಂಡಕ್ಕೆ ಬಿಡಲಾಗುತ್ತಿದೆ. ಭವಿಷ್ಯದಲ್ಲಿ ಉತ್ಪಾದನೆ ಹೆಚ್ಚಾದರೆ ಸ್ವಂತ ಹೊಂಡ ಅಗತ್ಯವೆಂಬ ಕಾರಣಕ್ಕೆ ಈ ಕ್ರಮ
ಕೈಗೊಳ್ಳಲಾಗಿದೆ. ಅಗತ್ಯ ಎನಿಸಿದರೆ ಹೆಚ್ಚುವರಿ ಭೂಮಿ ಖರೀದಿ ಮಾಡುವ ಚಿಂತನೆಯಿದೆ.
● ಕೇಶವ ಇ. ನಾಯಕ, ಮುಖ್ಯ ಎಂಜಿನಿಯರ್‌, ವೈಟಿಪಿಎಸ್‌

ಸಿದ್ದಯ್ಯಸ್ವಾಮಿ ಕುಕುನೂರ್

Advertisement

Udayavani is now on Telegram. Click here to join our channel and stay updated with the latest news.

Next