Advertisement

ಬಿರುಗಾಳಿ ಮಳೆಗೆ 100 ಎಕರೆ ಬಾಳೆ ನಾಶ

10:07 PM May 07, 2019 | Lakshmi GovindaRaj |

ಹುಣಸೂರು: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿಳಿಕೆರೆ ಹೋಬಳಿಯಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಫಸಲು ಬಿರುಗಾಳಿಗೆ ಸಿಲುಕಿ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Advertisement

ಹನಗೋಡು ಹೋಬಳಿಯಲ್ಲಿ 10 ದಿನಗಳ ಹಿಂದಷ್ಟೆ ಬಿರುಗಾಳಿ ಮಳೆಗೆ ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ, ಬೆಳೆ ನಷ್ಟ ಉಂಟಾದ ಘಟನೆ ಬೆನ್ನಲ್ಲೇ ಬಿಳಿಕೆರೆ ಹೋಬಳಿಯಲ್ಲಿ ಬಿರುಗಾಳಿ ಅವಘಡ ಉಂಟುಮಾಡಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬಿಳಿಕೆರೆ ಹೋಬಳಿ ವ್ಯಾಪ್ತಿಯ ಹಳ್ಳದಕೊಪ್ಪಲು, ಶಾಂತಿಪುರ, ಏಲಕ್ಕಿಕಟ್ಟೆ, ಗದ್ದಿಗೆ ಮತ್ತಿತರ ಕಡೆ ಸಂಜೆ ಬೀಸಿದ ಬಿರುಗಾಳಿಗೆ ಈ ಭಾಗದಲ್ಲಿ ಅತಿಹೆಚ್ಚು ಬೆಳೆಯುವ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಹಳ್ಳದಕೊಪ್ಪಲು ಗ್ರಾಮದ ಶಿವಣ್ಣ ಹಾಗೂ ಕುಮಾರ ಅವರ ತಲಾ ಒಂದು ಎಕರೆ, ತರೀಕಲ್‌ ಗಣೇಶ್‌ 2 ಎಕರೆ,

ಕೆಂಡಗಣಪುರದ ಪಾನಿಪುರಿ ಚಂದ್ರ ಹಾಗೂ ಸೋಮೇಶ್‌ ತಲಾ 2 ಎಕರೆ ಬಾಳೆ ಹಾನಿಯಾಗಿದೆ. ಈ ಭಾಗದಲ್ಲಿ ಜಮೀನಿನ ಬದಿಯಲ್ಲಿದ್ದ 10ಕ್ಕು ಹೆಚ್ಚು ಮರಗಳು ನೆಲಕ್ಕುರುಳಿವೆ. ಗದ್ದಿಗೆಯ ಮಯೂರಾಪುರದ ವೆಂಕಟೇಶ್‌ ಅವರ ಎರಡು ಎಕರೆ ಬಾಳೆ, ಕುಟ್ಟುವಾಡಿಯ ಶಿವಣ್ಣೇಗೌಡರ 1 ಎಕರೆ ಬಾಳೆ ನಾಶವಾಗಿದೆ.

ಕರಿಮುದ್ದನಹಳ್ಳಿ ಬಳಿಯ ಮೀನುಗಾರಿಕೆ ಇಲಾಖೆ ಸ್ಥಾಪಿಸಿರುವ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರದ ಆವರಣದಲ್ಲಿನ ಮೂರು ಬೃಹದಾಕಾರದ ಸುರಗಿ ಮರಗಳು ನೆಲಕ್ಕುರುಳಿವೆ. ಈ ಮರಗಳ ಬಳಿ ಹಾದು ಹೋಗಿದ್ದ 5 ವಿದ್ಯುತ್‌ ಕಂಬಗಳು ಬಿದ್ದಿವೆ. ಕಂಬದಿಂದ ಹಾದುಹೋಗಿದ್ದ ತಂತಿಗಳು ಜೊಂಪೆಯಾಗಿ ಅಲ್ಲೇ ಬಿದ್ದಿವೆ.

Advertisement

ಅಧಿಕಾರಿಗಳ ಭೇಟಿ: ಬಿರುಗಾಳಿಯಿಂದ ಹಾನಿಯಾದ ಪ್ರದೇಶಗಳಿಗೆ ರಾಜಸ್ವ ನಿರೀಕ್ಷಕ ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧರ್ಮಾಪುರದಲ್ಲಿ ಎರಡು ಮನೆಗಳ ಶೀಟ್‌ ಗಾಳಿಗೆ ಹಾರಿಹೋಗಿದೆ. ಹಾನಿಯ ಸಂಪೂರ್ಣ ವರದಿ ಬಂದ ನಂತರ ಪರಿಶೀಲನೆ ನಡೆಸುತ್ತೇನೆಂದು ತಹಸೀಲ್ದಾರ್‌ ಐ.ಇ.ಬಸವರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next