Advertisement

Artical 371 J ಜಾರಿಗೆ 10 ವರ್ಷ; ಸೆಪ್ಟೆಂಬರ್‌ನಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆ: ಡಿಸಿಎಂ

05:40 PM Aug 20, 2024 | Team Udayavani |

ಕಲಬುರ್ಗಿ: “ಆರ್ಟಿಕಲ್ 371 ಜೆ ಜಾರಿಯಾಗಿ ಹತ್ತು ವರ್ಷಗಳಾಗುತ್ತಿದ್ದು, ಇದರ ಸಂಭ್ರಮಾಚರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಭ್ರಮಾಚರಣೆ ನೆನಪಿಗೆ 371 ಹಾಸಿಗೆಗಳ ಒಳಗೊಂಡ ಜಯದೇವ ಆಸ್ಪತ್ರೆ ಮುಂದಿನ ತಿಂಗಳು ಲೋಕಾರ್ಪಣೆಗೊಳಿಸಲಾಗುವುದು” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

Advertisement

ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಕಲಬುರ್ಗಿಗೆ ಅಂತಾರಾಷ್ಟೀಯ ಗುಣಮಟ್ಟದ ಇಎಸ್ ಐ ಆಸ್ಪತ್ರೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಂದರು. ಕಲಬುರ್ಗಿ ರಾಜ್ಯದಲ್ಲಿ ಮೂರನೇ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್ ಗೆ ಹೋಗುವುದು ತಪ್ಪಲಿದೆ. ಸಂಭ್ರಮಾಚರಣೆ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷದ ಇಬ್ಬರು ನಾಯಕರ ಜೊತೆ ಚರ್ಚೆ ನಡೆಸಿ, ದಿನಾಂಕ ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದರು.

“ಆರ್ಟಿಕಲ್ 371 ಜೆ ಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಮಲ್ಲಿಖಾರ್ಜುನ ಖರ್ಗೆ ಅವರು ಮುಂದಾಳತ್ವವಹಿಸಿ ಜಾರಿಗೆ ತಂದರು. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದಿದೆ” ಎಂದರು.

ಟಿಬಿ ಡ್ಯಾಂ ಗೇಟ್ ದುರಸ್ತಿ ಮಾಡಿದ ಪ್ರತಿ ಕಾರ್ಮಿಕರಿಗೂ ಗೌರವ:
“70 ವರ್ಷಗಳ ಹಳೆಯ ತುಂಗಭದ್ರಾ ಅಣೆಕಟ್ಟಿನ 19 ನೇ ಗೇಟಿನ ಚೈನ್ ಲಿಂಕ್ ದುರಾದೃಷ್ಟವಶಾತ್ ತುಂಡಾಯಿತು. ಇದಕ್ಕೆ ಬಿಜೆಪಿ, ದಳದವರು ನಮ್ಮ ಮೇಲೆ ಗದಾಪ್ರಹಾರ ಮಾಡಿದರು. ನಾವು ಹಗಲು, ರಾತ್ರಿ ನಿದ್ದೆ ಮಾಡದೆ ಕಾರ್ಯಪ್ರವೃತ್ತರಾದೆವು. ಕೂಡಲೇ ಎಂಜಿನಿಯರ್ ಗಳು, ತಂತ್ರಜ್ಞರ ಕರೆಸಿ ಗೇಟ್‌ ಮತ್ತೆ ಅಳವಡಿಸಲಾಯಿತು. ಪ್ರತಿಯೊಬ್ಬ ಕೆಲಸಗಾರನೂ ಪಣತೊಟ್ಟು ಕೆಲಸ ಮಾಡಿದ್ದಾರೆ. ಈ ಕೆಲಸಕ್ಕೆ ಶ್ರಮಿಸಿದ ಚಿಕ್ಕ ಕಾರ್ಮಿಕರು, ಎಂಜಿನಿಯರ್ ಗಳು, ತಂತ್ರಜ್ಞರು, ಅಧಿಕಾರಿಗಳನ್ನು ಸನ್ಮಾನಿಸುವ  ಕೆಲಸ ಸರ್ಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ” ಎಂದು ತಿಳಿಸಿದರು.

ರೈತರ ಉಳಿಸುವ ಕೆಲಸ ಮಾಡುವೆವು:
“ಅಣೆಕಟ್ಟನ್ನು ಉಳಿಸಿಕೊಂಡಿದ್ದೇ ದೊಡ್ಡ ಪವಾಡ. ಗೇಟ್ ದುರಸ್ತಿ ಮಾಡಿ ರೈತರ ಪಾಲಿನ ನೀರು ಉಳಿಸಿದಂತಾಯಿತು. ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ. ಅದಕ್ಕೆ ನಾನು ಪದೇ, ಪದೇ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ” ಎಂದರು.

Advertisement

“ಗೇಟ್ ದುರಸ್ತಿ ಮಾಡಲು ಒಂದಷ್ಟು ನೀರನ್ನು ನದಿಗೆ ಬಿಡಬೇಕಾದ ಅನಿವಾರ್ಯತೆಯಿತ್ತು. ಈಗ ವರುಣನ ಕೃಪೆಯಿಂದ ಮಳೆ ಬರುತ್ತಿದೆ. ರೈತರ ಪಾಲಿನ ನೀರನ್ನು ಅವರಿಗೆ ಬಿಡಲಾಗುವುದು, ರೈತರನ್ನು ಉಳಿಸಿಕೊಳ್ಳುವ ಕೆಲಸ ನಾವು ಮಾಡುತ್ತೇವೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next