ಹೊಸದಿಲ್ಲಿ/ಬೆಂಗಳೂರು: ಕರ್ನಾಟಕ ಸಹಿತ ದೇಶದ 12 ರಾಜ್ಯಗಳಲ್ಲಿ ರೊಹಿಂಗ್ಯಾ ಮುಸ್ಲಿಮರು ವಾಸವಿದ್ದು, ಅವರ ಪತ್ತೆ ಮತ್ತು ಗಡೀಪಾರಿಗೆ ಕ್ರಮ ಕೈಗೊಳ್ಳಲು ಆಯಾ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಮ್ಯಾನ್ಮಾರ್‌ನಿಂದ ಬಂದ ರೊಹಿಂಗ್ಯಾ ವಲಸಿಗರು ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ಇಲ್ಲ. ಇವರು ಅಕ್ರಮವಾಗಿ ನುಸುಳಿದಾಗಿನಿಂದ ಭಾರತದ ಹಲವೆಡೆ ರಹಸ್ಯವಾಗಿ ಸಂಚರಿಸುತ್ತಿದ್ದಾರೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ಬುಧವಾರ ವಿವರ ನೀಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಐದಾರು ವರ್ಷಗಳಿಂದ ಬೆಂಗಳೂರು, ರಾಮನಗರ, ಉತ್ತರ ಕರ್ನಾಟಕದ ಕೆಲವೆಡೆ ಅಕ್ರಮವಾಗಿ ವಾಸವಾಗಿರುವ ರೊಹಿಂಗ್ಯಾ ಮುಸ್ಲಿಮರ ಪತ್ತೆ ನಿರಂತರವಾಗಿ ನಡೆಯುತ್ತಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ದಲಿತ ಮಕ್ಕಳಿಗೆ ನಾಲ್ಕು ಸೈನಿಕ ಶಾಲೆ: ಗೋವಿಂದ ಕಾರಜೋಳ
ಬೆಂಗಳೂರು, ಚಿಕ್ಕ ಮಗಳೂರು, ಕೊಡಗು, ಮಡಿಕೇರಿ, ಬೀದರ್, ಕಲಬುರಗಿ ಸಹಿತ ಇವರು ವಾಸವಾಗಿದ್ದಾರೆ. ಚಿಕ್ಕಮಗಳೂರು, ಕೊಡಗು, ಮಡಿಕೇರಿಗಳ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಚಿಂದಿ ಆಯುವುದು, ರಸ್ತೆ ಬದಿ ಆಟಿಕೆಗಳ ಮಾರಾಟ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮತ್ತಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.