ನವದೆಹಲಿ:ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ( ಇಡಬ್ಲ್ಯುಎಸ್) ಅಭ್ಯರ್ಥಿಗಳಿಗಾಗಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಂದಿದ್ದ 103ನೇ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಸೋಮವಾರ (ನವೆಂಬರ್ 07) 3:2ರ ಅನುಪಾತದಲ್ಲಿ ಎತ್ತಿಹಿಡಿದಿದೆ.
ಇದನ್ನೂ ಓದಿ:2012ರ ರೇಪ್ ಆ್ಯಂಡ್ ಮರ್ಡರ್ ಆರೋಪಿಗಳನ್ನು ಖುಲಾಸೆ ಮಾಡಿದ ಸುಪ್ರೀಂ!
ಶೇ.10ರಷ್ಟು ಮೀಸಲಾತಿ ಕುರಿತು ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನ ಪಂಚಸದಸ್ಯ ಪೀಠ ಮೂವರು ನ್ಯಾಯಾಧೀಶರು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಪರವಾಗಿದ್ದು, ಇದು ಯಾವುದೇ ಕಾಯ್ದೆಯನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನೊಳಗೊಂಡ ಪಂಚ ಸದಸ್ಯ ಪೀಠದಲ್ಲಿ ಜಸ್ಟೀಸ್ ದಿನೇಶ್ ಮಹೇಶ್ವರಿ, ಜಸ್ಟೀಸ್ ಎಸ್.ರವೀಂದ್ರ ಭಟ್, ಜಸ್ಟೀಸ್ ಬೇಲಾ ಎಂ ತ್ರಿವೇದಿ ಮತ್ತು ಜಸ್ಟೀಸ್ ಜೆ.ಬಿ ಪಾರ್ಡಿವಾಲಾ ಅವರು ಶೇ.10ರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಂದಿದ್ದ 103ನೇ ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿದ್ದರು.
ಶೇ.10ರಷ್ಟು ಮೀಸಲಾತಿ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಏಳು ದಿನಗಳ ಕಾಲ ನಡೆದಿದ್ದು, ಘಟಾನುಘಟಿ ವಕೀಲರು ವಾದ, ಪ್ರತಿವಾದ ಮಂಡಿಸಿದ ನಂತರ ಸೆಪ್ಟೆಂಬರ್ 27ರಂದು ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ಕಾಯ್ದಿರಿಸಿತ್ತು.
ಏನಿದು ಪ್ರಕರಣ?
ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾಜಿಕ ಸಮಾನತೆ ತರುವ ಉದ್ದೇಶದಿಂದ ಮೇಲ್ವರ್ಗಗಳಲ್ಲಿ ಇರುವ ಬಡವರಿಗೆ ಕೇಂದ್ರ ಸರ್ಕಾರ 2019ರಲ್ಲಿ ಶೇ.10ರಷ್ಟು ಮೀಸಲಾತಿ ನೀಡಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದು ಈಗಾಗಲೇ ಜಾರಿಯಲ್ಲಿರುವ ಶೇ.50ರ ಮಿತಿಗೆ ಹೊರತಾಗಿದ್ದು, ಇದನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು.