ಕಲಬುರಗಿ: ನಗರದ ಸೆಂಟ್ರಲ್ ಜೈಲಿನಿಂದ ಪೆರೋಲ್ ಮೇಲೆ ತೆರಳಿದ್ದ 10 ಆರೋಪಿಗಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನೆಲ್ಲ ಬೇರೊಂದು ಕಡೆ ಇರಿಸಲಾಗಿದ್ದರಿಂದ ಜೈಲು ಅಧಿಕಾರಿಗಳು ಮತ್ತು ಇತರ ಕೈದಿಗಳು ನಿಟ್ಟುಸಿರು ಬಿಡುವಂತೆ ಆಗಿದೆ.
ಕೊವಿಡ್ 19 ಸೋಂಕು ಭೀತಿ ಹಿನ್ನೆಲೆಯಿಂದಲೇ 73 ಜನ ಕೈದಿಗಳನ್ನು ಪೆರೋಲ್ ಮೇಲೆ ಕಳುಹಿಸಲಾಗಿತ್ತು. ಇದರಲ್ಲಿ ಇತ್ತೀಚಿಗೆ 60 ಜನರು ಮರಳಿ ಬಂದಿದ್ದಾರೆ. ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, 10 ಜನರಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಎಲ್ಲ ಸೋಂಕಿತರನ್ನು ಈಗ ಐಸೋಲೇಷನ್ ವಾರ್ಡ್ ಗೆ ದಾಖಲಾಗಿಸಲಾಗಿದೆ.
ಕೇಂದ್ರ ಕಾರಾಗೃಹದಲ್ಲಿ ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ಬರಲಾಗಿದೆ. ಹೊಸ ಆರೋಪಿಗಳು ಮತ್ತು ಪೆರೋಲ್ ಮೇಲೆ ಹೋಗಿರುವ ಕೈದಿಗಳಿಗಾಗಿ ಜೈಲಿನ ಸಮೀಪದ ಕಟ್ಟಡವೊಂದರ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ನೆಗೆಟಿವ್ ವರದಿ ಬಂದವರನ್ನು ಮಾತ್ರವೇ ಜೈಲಿನ ಒಳಗಡೆ ಬಿಡಲಾಗುತ್ತದೆ. ಪಾಸಿಟಿವ್ ಬರುವ ಸೋಂಕಿತ ಕೈದಿಗಳಿಗೆ ಪ್ರತ್ಯೇಕ ಐಸೋಲೇಷನ್ ವಾರ್ಡ್ ಮಾಡಲಾಗಿದ್ದು. ಅಲ್ಲಿನ ಅವರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಐಸೋಲೇಷನ್ ವಾರ್ಡ್ ಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ಜೈಲಿನ ಅಧೀಕ್ಷಕ ರಮೇಶ ಮಾಹಿತಿ ನೀಡಿದ್ದಾರೆ.
ಎಸ್‍ಪಿ ಕಚೇರಿಗೂ ಕಂಟಕ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ಕೋವಿಡ್ ಕಂಟಕ ಶುರುವಾಗಿದ್ದು, ಕಚೇರಿಯ ಏಳು ಮಂದಿ ಸಿಬ್ಬಂದಿಗೂ ಸೋಂಕು ವಕ್ಕರಿಸಿದೆ.
ಪೊಲೀಸರಿಗೆ ಸೋಂಕು ಹರಡುತ್ತಿರುವುದರಿಂದ ಎಲ್ಲ ಸಿಬ್ಬಂದಿಗೆ random ಪರೀಕ್ಷೆ ಮಾಡಲಾಗುತ್ತಿದ್ದು, ಇದರಲ್ಲಿ 47 ವರ್ಷ, 48 ವರ್ಷ, 49 ವರ್ಷ ಹೀಗೆ ವಿವಿಧ ವಯೋಮಾನದ ಸಿಬ್ಬಂದಿಗೆ ಕೋವಿಡ್ ಪತ್ತೆಯಾಗಿದೆ.