ಚಂಡೀಗಢ: ಪಂಜಾಬ್ ರಾಜ್ಯದ ತರ್ನ್ ತರಣ್ ನ ಗುರುದ್ವಾರದಲ್ಲಿ ಪ್ರಸಾದ ಸ್ವೀಕರಿಸಿದ ಹತ್ತು ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ ನಡೆದಿದೆ.
ಅಸ್ವಸ್ಥರನ್ನು ಅಮೃತಸರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ರಘುವೀರ್ ಸಿಂಗ್ ಎಂಬವರ ಮನೆಯಲ್ಲಿ ‘ಸುಖಮನಿ ಸಾಹಿಬ್’ಪ್ರವಚನ ಏರ್ಪಡಿಸಲಾಗಿತ್ತು. ಅವರ ತಾಯಿ ಇತ್ತೀಚೆಗೆ ವಿಧಿವಶರಾಗಿದ್ದು, ಆ ಕಾರಣಕ್ಕಾಗಿ ಪ್ರವಚನ ಏರ್ಪಡಿಸಲಾಗಿತ್ತು. ನಂತರ ಮನೆಮಂದಿಗೆಲ್ಲಾ ಪ್ರಸಾದ ವಿತರಿಸಲಾಗಿತ್ತು.
ಉಳಿದ ಪ್ರಸಾದವನ್ನು ಬಳಿಯ ಗುರುದ್ವಾರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಪ್ರವಚಕ ಪ್ರಸಾದವನ್ನು ತನ್ನ ಮಕ್ಕಳಿಗೆ ಮತ್ತು ಭಕ್ತರಿಗೆ ನೀಡಿದ್ದರು. ಪ್ರಸಾದ ಸ್ವೀಕರಿಸಿದ್ದವರಲ್ಲಿ ಹತ್ತು ಮಂದಿ ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಹಂಚಿ ಬಾಕಿ ಉಳಿದಿದ್ದ ಪ್ರಸಾದವನ್ನು ಗುರುದ್ವಾರಕ್ಕೆ ತೆಗೆದುಕೊಂಡು ಹೋಗುವ ಹಂತದಲ್ಲಿ ಅದಕ್ಕೆ ಏನಾದರೂ ವಿಷಕಾರಿ ಅಂಶ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ.