Advertisement

ನರೇಗಾ ಯೋಜನೆಯಡಿ 10 ಹೊಸ ಕಾಮಗಾರಿ; ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ

11:03 PM Apr 30, 2022 | Team Udayavani |

ಬೆಂಗಳೂರು: ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ರಾಜ್ಯದಲ್ಲಿ 10 ಹೊಸ ಕಾಮಗಾರಿಗಳ ಸೇರ್ಪಡೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.

Advertisement

ರಾಜ್ಯ ಉದ್ಯೋಗ ಖಾತರಿ ಪರಿಷತ್‌ನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಒಂದೊಮ್ಮೆ ಕೇಂದ್ರ ಸರಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರೆ ಈಗಿರುವ ಕಾಮಗಾರಿಗಳ ಜತೆಗೆ ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕೇಂದ್ರದ ಕಟ್ಟಡ ಮತ್ತು ಕಾಂಪೌಂಡ್‌ ನಿರ್ಮಾಣ, ಕಾಫಿ ಬೀಜ ಒಣಗಿಸುವ ಅಂಗಳ ಸೇರಿದಂತೆ 10 ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಸಿಗಲಿದೆ.

ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಬಹುದಾದ ಕಾಮಗಾರಿಗಳ ಪಟ್ಟಿಯನ್ನು ಕೇಂದ್ರ ಸರಕಾರ ಅಧಿಸೂಚಿಸುತ್ತದೆ. ರಾಜ್ಯದಲ್ಲಿ ವಿವಿಧ ಇಲಾಖೆಗಳಿಂದ ಹಲವು ಅತ್ಯಾವಶ್ಯಕ ಕಾಮಗಾರಿಗಳ ಕುರಿತು ಬೇಡಿಕೆ ಬರುತ್ತಿದ್ದು, ಈ ನಿಟ್ಟಿನಲ್ಲಿ ಪ್ರಸ್ತಾವಿತ 10 ಹೊಸ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಸ್ತಾವಿಸಿದರು. ಅದರಂತೆ, ಇತ್ತೀಚೆಗೆ ನಡೆದ ಉದ್ಯೋಗ ಖಾತರಿ ಪರಿಷತ್‌ ಸಭೆಯಲ್ಲಿ 10 ಹೊಸ ಕಾಮಗಾರಿಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

ನರೇಗಾ: ಬೇಡಿಕೆ ಹೆಚ್ಚಿದೆ
ರಾಜ್ಯದಲ್ಲಿ ನರೇಗಾ ಕಾಮಗಾರಿಗಳಿಗೆ ಬೇಡಿಕೆ ಹೆಚ್ಚಿದ್ದು, ಗುಣಮಟ್ಟವೂ ಇದೆ. ಈಗಾಗಲೇ ನಿಗದಿಪಡಿಸಲಾಗಿರುವ ಕಾಮಗಾರಿಗಳಲ್ಲಿ ರಾಜ್ಯ ಉತ್ತಮ ಸಾಧನೆ ಮಾಡಿದೆ. ಹೊಸ ಕಾಮಗಾರಿಗಳ ಬಗ್ಗೆ ವಿವಿಧ ಇಲಾಖೆಗಳಿಂದ ಬೇಡಿಕೆ ಬರುತ್ತಿದೆ. ಮುಖ್ಯವಾಗಿ ಶಾಲೆ, ಅಂಗನವಾಡಿ ಕೇಂದ್ರಗಳ ಕಾಂಪೌಂಡ್‌ ಗೋಡೆ ಕಟ್ಟಲು ಸಂಬಂಧಪಟ್ಟ ಇಲಾಖೆಗಳ ಬಳಿ ಅನುದಾನ ಇರುವುದಿಲ್ಲ. ಆದ್ದರಿಂದ ಈ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಂಡರೆ ಸಂಬಂಧಪಟ್ಟ ಇಲಾಖೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದಂತಾಗುತ್ತದೆ. ಜತೆಗೆ ಹೆಚ್ಚು ಜನರಿಗೆ ಉದ್ಯೋಗ ಕೊಡಲು ಅವಕಾಶ ಸಿಗುತ್ತದೆ. 2020ರಲ್ಲೂ ಇಂತಹದ್ದೇ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಬಾರಿ ಮತ್ತೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

10 ಹೊಸ ಕಾಮಗಾರಿಗಳು ಯಾವವು?
– ಸರಕಾರಿ ಶಾಲಾ ಕೊಠಡಿಗಳ ನಿರ್ಮಾಣ.
– ಅಂಗನವಾಡಿ ಕಟ್ಟಡ ಮತ್ತು ಆವರಣ ಗೋಡೆ ನಿರ್ಮಾಣ.
– ಗ್ರಾ.ಪಂ. ಗ್ರಂಥಾಲಯ ಕಟ್ಟಡ ನಿರ್ಮಾಣ.
– ಗ್ರಾ.ಪಂ. ಕಟ್ಟಡ/ರಾಜೀವ್‌ ಗಾಂಧಿ ಸೇವಾ ಕೇಂದ್ರಗಳಿಗೆ ಆವರಣ ಗೋಡೆ.
– ಪ್ರಾಥಮಿಕ ಆರೋಗ್ಯ ಕೇಂದ್ರ/ವೆಲ್‌ನೆಸ್‌ ಸೆಂಟರ್‌ ಕಟ್ಟಡ ನಿರ್ಮಾಣ.
– ರೇಷ್ಮೆ ಹುಳು ಸಾಕಣೆ ಶೆಡ್‌ ನಿರ್ಮಾಣ.
– ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಕೋಯ್ಲೋತ್ತರ ಶೇಖರಣ
ಘಟಕಗಳ ನಿರ್ಮಾಣ.
– ವೈಯಕ್ತಿಕ ಫ‌ಲಾನುಭವಿಗಳಿಗೆ ಅಣಬೆ ಬೇಸಾಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೋಯ್ಲೋತ್ತರ
ಶೇಖರಣ ಘಟಕಗಳ ನಿರ್ಮಾಣ.
– ಕಾಫಿ ಬೀಜಗಳನ್ನು ಒಣಗಿಸಲು ನರೇಗಾ ಯೋಜನೆಯಡಿ ಒಣಗಿಸುವ ಅಂಗಳ
ನಿರ್ಮಾಣ ಸೌಲಭ್ಯವನ್ನು ಒದಗಿಸುವುದು.
-ಸರಕಾರಿ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳಿಗೆ ಆವರಣ ಗೋಡೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next