Advertisement

ರೇವೂರ್‌ಗೆ ಸಚಿವ ಸ್ಥಾನ ನೀಡದೇ ಇದ್ದರೆ 10 ಶಾಸಕರ ರಾಜೀನಾಮೆ

11:53 PM Feb 28, 2020 | Team Udayavani |

ಕಲಬುರಗಿ: ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ವರ್ಷದೊಳಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಅದರಂತೆ ಸಚಿವ ಸ್ಥಾನ ಕೊಡಬೇಕು. ಇಲ್ಲವಾದರೆ ಕಲ್ಯಾಣ ಕರ್ನಾಟಕ ಭಾಗದ ಹತ್ತು ಶಾಸಕರ ರಾಜೀನಾಮೆ ಕೊಡಿಸುತ್ತೇನೆಂದು ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

Advertisement

ನಗರದ ನೂತನ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಎಸ್‌. ಯಡಿಯೂರಪ್ಪ ಮತ್ತು ದತ್ತಾತ್ರೇಯ ಪಾಟೀಲ ರೇವೂರ ಜನ್ಮ ದಿನಾಚರಣೆ, ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಸ್ವಾಮೀಜಿಗಳ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರೇವೂರ ಅವರನ್ನು ಸಚಿವರನ್ನಾಗಿ ಮಾಡಲು ಕೇಳಿದ್ದೆವು. ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ, ಒಂದು ವರ್ಷದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ರೇವೂರ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಹತ್ತು ಶಾಸಕರ ರಾಜೀನಾಮೆ ಕೊಡಿಸುವ ತಾಕತ್ತು ನನ್ನಲ್ಲಿದೆ ಎಂದರು.

ನಾನೇನು ಸರ್ಕಾರ ಬೀಳಿಸುವ ಉದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಉಳಿಯಬೇಕು. ಈ ಮೂರು ವರ್ಷ ಮಾತ್ರವಲ್ಲ, ಮುಂದಿನ ಐದು ವರ್ಷವೂ ಅವರೇ ಸರ್ಕಾರ ನಡೆಸಬೇಕು. ಅದಕ್ಕಾಗಿ ಹೇಳುತ್ತಿದ್ದೇನೆ. ಯಡಿಯೂರಪ್ಪ ನಂತರ ಮುಂದಿನ 30 ವರ್ಷದವರೆಗೆ ಯಾವೊಬ್ಬ ಲಿಂಗಾಯತನೂ ಸಿಎಂ ಆಗುವ ಸಾಧ್ಯತೆ ಇಲ್ಲ. ಅಂತಹ ಅವಕಾಶಗಳೇ ಹುಟ್ಟುವುದಿಲ್ಲ. ಅದಕ್ಕಾಗಿ ಈಗಲೇ ರೇವೂರ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದರು.

ಕಲಬುರಗಿಯಲ್ಲಿ 20 ವರ್ಷಗಳ ಹಿಂದೆ ಬಿಜೆಪಿ ಅಂದರೆ ಹಳೆ ನಾಯಿಯೂ ಕೇಳುತ್ತಿರಲಿಲ್ಲ. ದತ್ತಾತ್ರೇಯ ಪಾಟೀಲರ ತಂದೆ ಚಂದ್ರಶೇಖರ ಪಾಟೀಲ ರೇವೂರ ತಮ್ಮ ಆಸ್ತಿ ಮಾರಿ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದಾರೆ. ಅವರು ಸಚಿವರಾಗಬೇಕೆಂಬ ಆಸೆ ಇಟ್ಟುಕೊಂಡು ತೀರಿಕೊಂಡರು. ಇದೇ ಬಿಜೆಪಿ ಸರ್ಕಾರ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ, ಈಗ ಅವರ ಪುತ್ರನಿಗೆ ಸಚಿವ ಸ್ಥಾನ ನೀಡಬೇಕು ಎಂದರು. ಸ್ವಾಮೀಜಿಗಳ ಈ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಕಂದಾಯ ಸಚಿವ ಆರ್‌. ಅಶೋಕ ಮತ್ತು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪ್ರತಿಕ್ರಿಯಿಸಲು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next