ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಇಬ್ಬರು ಮಹಿಳೆಯರು, ನಾಲ್ವರು ಮಕ್ಕಳು ಸೇರಿದಂತೆ 10 ಮಂದಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಶಂಕೆ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿ ಐಸಿಸ್‌ಗೆ ಸೇರ್ಪಡೆಯಾಗಿದ್ದ ವಿಚಾರ ಸುದ್ದಿಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಇದೇ ರಾಜ್ಯದ 10 ಮಂದಿ ‘ಉಗ್ರ’ ಹೆಜ್ಜೆಯಿಟ್ಟ ಅನುಮಾನ ವ್ಯಕ್ತವಾಗಿದೆ.
ಈ ಹತ್ತೂ ಮಂದಿ ದುಬೈ ಮಾರ್ಗವಾಗಿ ಅಫ್ಘಾನಿಸ್ಥಾನಕ್ಕೆ ತೆರಳಿ ಐಸಿಸ್ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಇವರ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ. ಆದರೆ, ಐಸಿಸ್ ಸೇರಿಕೊಂಡಿದ್ದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ ಎಂದು ದಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ. ನಾಪತ್ತೆಯಾದ ಹತ್ತು ಮಂದಿಯಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆನ್ನುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕಣ್ಣೂರು ಜಿಲ್ಲೆಯ ಕೆ. ಸಾಜಿದ್, ಪತ್ನಿ ಶಾಹೀನಾ ಮತ್ತು ಇಬ್ಬರು ಮಕ್ಕಳು ಐಸಿಸ್ ಸೇರಿದ ಒಂದು ಕುಟುಂಬವಾದರೆ, ಕೆ.ಅನ್ವರ್, ಪತ್ನಿ ಆಫ್ಸೀಲಾ ಮತ್ತು ಇಬ್ಬರು ಮಕ್ಕಳು ಕಣ್ಮರೆಯಾದ ಇನ್ನೊಂದು ಕುಟುಂಬ ಎನ್ನಲಾಗಿದೆ. ಇನ್ನು ಈ ಕುಟುಂಬದ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಇನ್ನಿಬ್ಬರೂ ನಾಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರಿನ ಡಿಎಸ್‌ಪಿ ಪಿ.ಪಿ. ಸದಾನಂದನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅಲ್ಲದೆ, ರಾಜ್ಯದ ಸುಮಾರು 100 ಮಂದಿ ಬೇರೆ ಬೇರೆ ದೇಶಗಳಿಂದ ಐಸಿಸ್ ತೆಕ್ಕೆಗೆ ಬಿದ್ದಿರಬಹುದು ಎಂಬ ಶಂಕೆಯನ್ನೂ ಸದಾನಂದನ್ ವ್ಯಕ್ತಪಡಿಸಿದ್ದಾರೆ.
ಮೈಸೂರಿಗೆಂದು ಹೇಳಿ ಹೋಗಿದ್ದರು
ಈ 10 ಮಂದಿ ನ.20ರಂದು ಒಟ್ಟಿಗೆ ಮೈಸೂರಿಗೆಂದು ಹೇಳಿ ತೆರಳಿದ್ದರು. ಆದರೆ, ಅವರು ನೇರ ವಾಗಿ ಬೆಂಗಳೂರು ತಲುಪಿ, ಅಲ್ಲಿಂದ ದುಬೈಗೆ ಪ್ರಯಾಣ ಬೆಳೆಸಿದ್ದರು. ಪ್ರಯಾಣಕ್ಕೂ ಮುನ್ನ ಕೆಲ ಸ್ನೇಹಿತರು, ಕುಟುಂಬಸ್ಥರಿಗೆ ಕರೆ ಮಾಡಿ, ‘ನಾವು ಪವಿತ್ರ ಭೂಮಿಗೆ ಹೋಗುತ್ತಿದ್ದೇವೆ. ಮತ್ತೆ ಹಿಂದಿರುಗಿ ಬರುವುದಿಲ್ಲ’ ಎಂದಿದ್ದರು. ಅಲ್ಲದೇ, ನೀವೂ ನಮ್ಮೊಂದಿಗೆ ಸೇರಿಕೊಳ್ಳಿ ಎಂಬ ಆಹ್ವಾನವನ್ನೂ ನೀಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಡನ್ನ ಮತ್ತು ಥ್ರಿಕ್ಕರಿಯೂರ್, ವಲ್ಪಟ್ಟನನ್ ಮತ್ತು ಮುಂಡೇರಿ ಹಾಗೂ ಗಲ್ಫ್ನ ಬಹರೇನ್‌ನಲ್ಲಿ ಉಗ್ರರ ತಾಣಗಳಿದ್ದು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಯ ಕೆಲವು ಯುವಕರೇ ಇವುಗಳನ್ನು ನಿಭಾಯಿಸುತ್ತಿದ್ದಾರೆ ಎಂಬ ಮಾಹಿತಿಯಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ಇಡಲಾಗಿದೆ.
– ಪಿ.ಪಿ. ಸದಾನಂದನ್, ಡಿಎಸ್ಪಿ