Advertisement

ಮಳೆಗೆ 10 ಮನೆಗಳು ಧರೆಗೆ

10:57 AM Sep 15, 2017 | |

ಹರಪನಹಳ್ಳಿ: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬುಧವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಕುಣೇಮಾದಿಹಳ್ಳಿ ಗ್ರಾಮದಲ್ಲಿ 5 ಮನೆಗಳು ಸಂಪೂರ್ಣ ಧರೆಗುರುಳಿ, 5 ಮನೆಗಳು ಜಖಂಗೊಂಡಿರುವ ಘಟನೆ ಜರುಗಿದೆ.

Advertisement

ಕುಣೇಮಾದಿಹಳ್ಳಿ ಗ್ರಾಮದ ಪಿಂಜಾರ ಖಾಸೀಮಸಾಬ್‌, ಶರೀಫ್‌ಸಾಬ್‌, ಜಿ.ಕೋಟ್ರಪ್ಪ, ಎನ್‌.ನಾಗಮ್ಮ, ರುದ್ರಪ್ಪ ಎಂಬುವವರ ಒಟ್ಟು 5 ಮನೆಗಳು ಸಂಪೂರ್ಣ ಧರೆಗುರುಳಿವೆ. ಹನುಮಂತಪ್ಪ, ವೀರಣ್ಣ, ಕೋಟ್ರಪ್ಪ, ಹುಚ್ಚಪ್ಪ, ಅನಾರಲಿ ಸಾಬ್‌ ಎಂಬುವವರ ಒಟ್ಟು 5 ಮನೆಗಳು ಮಳೆಗೆ ಖಜಂಗೊಂಡಿವೆ. ಮನೆಗಳನ್ನು ಕಳೆದುಕೊಂಡಿರುವ ಜನರು ದೇವಸ್ಥಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ನಿರಂತರ ಬರ ಆವರಿಸಿದ್ದು, ಮಳೆ ಇಲ್ಲದೇ ಕರೆ, ಬಾವಿ, ಗೋಕಟ್ಟೆ, ಕೃಷಿ ಹೊಂಡಗಳು ಸಂಪೂರ್ಣ ಒಣಗಿದ್ದವು. ಪ್ರಸ್ತಕ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಕಳೆದ ಮೂರು ದಿನಗಳಿಂದ ದೊಡ್ಡ
ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಗೋಕಟ್ಟೆ, ಕೃಷಿ ಹೊಂಡಗಳು ಮೈದುಂಬಿಕೊಂಡಿವೆ. ಹಲವಾರು ಕೆರೆಗಳಿಗೆ ಸಣ್ಣ ಪ್ರಮಾಣದಲ್ಲಿ ನೀರು ಶೇಖರಣೆಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುತ್ತಿದೆ.

ಮಳೆ ಬಾರದಿರುವುದರಿಂದ ಚರಂಡಿಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ತಾಲೂಕಿನ ಬಹುತೇಕ ಜನರು ಜ್ವರದ ಭಾದೆಯಿಂದ ಬಳಲುತ್ತಿದ್ದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜನರು ಸಾಲುಗಟ್ಟಿ ನಿಂತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಮಳೆ ಸುರಿಯುತ್ತಿರುವುದರಿಂದ ಚರಂಡಿಗಳು ಸ್ವತ್ಛಗೊಂಡು ಸೊಳ್ಳೆಗಳ ಹಾವಳಿ ತಗ್ಗಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಅಹಿತಕರ ಘಟನೆ ಜರುಗಿಲ್ಲ
ಹರಪನಹಳ್ಳಿ ಕಸಬಾ-22.2 ಮೀ.ಮೀ, ಚಿಗಟೇರಿ-20.0, ತೆಲಿಗಿ-32.2, ಹಲುವಾಗಲು-60.4 ಹೋಬಳಿಗಳಲ್ಲಿ ಒಟ್ಟು
234.8 ಮಿ.ಮೀ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಮಳೆಯಿಂದ ಮನೆಗಳು ಜಖಂಗೊಂಡಿರುವುದನ್ನು
ಹೊರತುಪಡಿಸಿ ಯಾವುದೇ ಅಹಿತಕರ ಘಟನೆ ಜರುಗಿಲ್ಲ ಎಂದು ತಹಶೀಲ್ದಾರ್‌ ಕೆ.ಗುರುಬಸವರಾಜ್‌ ತಿಳಿಸಿದ್ದಾರೆ.

Advertisement

ಹೊನ್ನಾಳಿಯಲ್ಲಿ ರಭಸದ ಮಳೆ
ಹೊನ್ನಾಳಿ: ತಾಲೂಕಿನಾದ್ಯಂತ ಬುಧವಾರ ರಾತ್ರಿ 8.30ರಿಂದ 9.30ರವರೆಗೆ ಸತತ ಒಂದು ಗಂಟೆ ಕಾಲ ಪಟ್ಟಣದಲ್ಲಿ ಮಳೆ ಸುರಿದಿದೆ. ಗುಡುಗು ಸಿಡಿಲಿನಿಂದ ಕೂಡಿದ ಈ ಮಳೆಗೆ ಪಟ್ಟಣದಲ್ಲಿ ಸಂಪೂರ್ಣ ವಿದ್ಯುತ್‌ ಸ್ಥಗಿತಗೊಂಡಿತ್ತು.
ಮಳೆ ವಿವರ: ಹೊನ್ನಾಳಿ- 36.8ಮಿ.ಮೀ., ದೇವನಾಯ್ಕನಹಳ್ಳಿ- 43ಮಿ.ಮೀ., ಬೆಳಗುತ್ತಿ- 11.4ಮಿ.ಮೀ., ಗೋವಿನಕೋವಿ- 33.8ಮಿ.ಮೀ., ಕುಂದೂರು-4ಮಿ. ಮೀ., ಸೌಳಂಗ-3.3ಮಿ.ಮೀ., ಸಾಸ್ವೆಹಳ್ಳಿ-15.6ಮಿ.ಮೀ. ಮಳೆ ಸುರಿದಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next