ಮಸ್ಕಿ: ತಾಲೂಕಿನ ಬಳಗಾನೂರು ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 10-15 ಪ್ರೌಢಶಾಲೆಗಳಿವೆ. ವಾರ್ಷಿಕ ಕನಿಷ್ಟ 1000 ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲೇರುತ್ತಾರೆ. ಆದರೆ ಇಲ್ಲಿ ಒಂದು ಪದವಿ ಪೂರ್ವ-ಪದವಿ ಕಾಲೇಜುಗಳಿಲ್ಲ!.
ತಾಲೂಕಿನ ಹಿರಿಯ ಹೋಬಳಿ ಎಂದೇ ಬಿಂಬಿತವಾದ ಬಳಗಾನೂರಿನಲ್ಲಿನ ದುಸ್ಥಿತಿ ಇದು. ಸರಕಾರ ಇಲ್ಲಿ ಕಾಲೇಜು ಶಿಕ್ಷಣ ಆರಂಭಿಸದೇ ಇರುವುದರಿಂದ ವರ್ಷಕ್ಕೆ ಕನಿಷ್ಠ 300-400 ವಿದ್ಯಾರ್ಥಿಗಳು ದೂರದ ಕಾಲೇಜುಗಳಿಗೆ ಹೋಗಲು ಆಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಾಲೇಜು ಶಿಕ್ಷಣ ಆರಂಭಿಸಬೇಕು ಎಂದು ಕಳೆದ ಆರೇಳು ವರ್ಷಗಳಿಂದ ಇಲ್ಲಿನ ನಾಗರಿಕರು, ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿವೆ. ಶಿಕ್ಷಣ ಇಲಾಖೆ ಸಚಿವರಿಂದ ಹಿಡಿದು ಸ್ಥಳೀಯ ಶಾಸಕರವರೆಗೂ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಕಾಲೇಜು ಕನಸು ಈಡೇರುತ್ತಿಲ್ಲ.
ಏನಿದೆ ಪರಿಸ್ಥಿತಿ?: ಬಳಗಾನೂರು ಪಟ್ಟಣ ಪಂಚಾಯಿತಿ ಸೇರಿ ಸುತ್ತಲೂ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳು ಬಳಗಾನೂರು ಪಟ್ಟಣಕ್ಕೆ ಹೊಂದಿಕೊಂಡಿವೆ. ಬಳಗಾನೂರು ಪಟ್ಟಣದಲ್ಲಿ ಸರಕಾರಿ ಸೇರಿ ಖಾಸಗಿಯಾಗಿ ಹಲವು ಪ್ರೌಢಶಾಲೆಗಳಿವೆ. ಇನ್ನು ಬಳಗಾನೂರು ಸಮೀಪದ ದಿದ್ದಗಿ, ಜಾಲವಾಡಗಿ, ಉದಾºಳ, ಹುಲ್ಲೂರು, ಗೌಡನಭಾವಿ ಸೇರಿ ಹಲವು ಹಳ್ಳಿಗಳಲ್ಲಿ ಸರಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳು ತಲೆ ಎತ್ತಿವೆ. 10ನೇ ತರಗತಿವರೆಗೂ ಇಲ್ಲಿನ ಹೋಬಳಿ ವಿದ್ಯಾರ್ಥಿಗಳು ಯಾವುದೇ ಅಡೆ-ತಡೆಇಲ್ಲದೇ ಪ್ರೌಢ ಶಿಕ್ಷಣ ಮುಗಿಸುತ್ತಾರೆ. ಆದರ ಪದವಿ ಪೂರ್ವ ಮೆಟ್ಟಿಲು ಹತ್ತುವುದೇ ಇಲ್ಲಿ ಸವಾಲಿನ ಕೆಲಸ. ಕಾಲೇಜು ಆಯ್ಕೆ? ದೂರದ ಕಾಲೇಜುಗಳಿಗೆ ಬಸ್ ಪಾಸ್ ಸೇರಿ ಇತರೆ ಹೊರೆ? ಅಲ್ಲದೇ ವಿಶೇಷವಾಗಿ ಹೆಣ್ಣು ಮಕ್ಕಳನ್ನು ದೂರದ ಕಾಲೇಜಿಗೆ ಕಳುಹಿಸುವುದೇಗೆ? ಎನ್ನುವ ಆತಂಕ ಇಲ್ಲಿನ ಹಲವು ವಿದ್ಯಾರ್ಥಿಗಳ ಭವಿಷ್ಯವನ್ನು ಮಂಕಾಗಿಸಿದೆ.
ನಿತ್ಯ ಹೊಯ್ದಾಟ: ಇಲ್ಲಿನ ವಿದ್ಯಾರ್ಥಿಗಳ ಪ್ರೌಢ ಶಿಕ್ಷಣ ಮುಕ್ತಾಯದ ಬಳಿಕ ಪದವಿ ಪೂರ್ವ, ಪದವಿ ಶಿಕ್ಷಣಕ್ಕಾಗಿ ಮಸ್ಕಿ, ನೆರೆಯ ಸಿಂಧನೂರು ಇಲ್ಲವೇ ಪೋತ್ನಾಳ ಕೇಂದ್ರಕ್ಕೆ ತೆರಳಬೇಕು. ಕಾಲೇಜು ಕೋರ್ಸ್ ಮಾಡಬೇಕೆಂದರೆ ನಿತ್ಯ ಸುಮಾರು 15-30 ಕಿ.ಮೀ. ಪ್ರಯಾಣ ಮಾಡಬೇಕು. ಇಲ್ಲವೇ ದೂರದ ವಸತಿ ಕೇಂದ್ರಗಳಲ್ಲೇ ಇದ್ದ ವ್ಯಾಸಂಗ ಮಾಡಬೇಕು. ಅದೂ ಇಲ್ಲವಾದರೆ ಕಾಲೇಜು ಮೆಟ್ಟಿಲು ಹತ್ತುವ ಕನಸನ್ನೇ ಕೈ ಬಿಡಬೇಕು. ಒಂದು ವೇಳೆ ಮಸ್ಕಿ, ಸಿಂಧನೂರು, ಪೋತ್ನಾಳ ಕೇಂದ್ರಗಳಿಗೆ ಕಾಲೇಜುಗಳಿಗೆ ತೆರಳಬೇಕಾದರೆ ನಿತ್ಯ ಬಸ್‌ನಲ್ಲಿ ಜಂಜಾಟ, ವಿದ್ಯಾರ್ಥಿಗಳ ನೂಕು-ನುಗ್ಗಲಿನ ನಡುವಿಯೇ ಬಸ್ ಹಿಡಿದು ಸಾಗಬೇಕು. ಎದ್ದು-ಬಿದ್ದು ಕಾಲೇಜಿಗೆ ಹೋಗುವ ವೇಳೆಗೆ ಎರಡೂ¾ರು ಕ್ಲಾಸ್ ಮುಗಿದು ಹೋಗಿರುತ್ತದೆ. ಇಂತಹ ಫಜೀತಿಯಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಇಂತಹ ಸಂಕಷ್ಟ ದೂರ ಮಾಡಲು ಸರಕಾರ ಕೂಡಲೇ ಕಾಲೇಜು ಶಿಕ್ಷಣ ವ್ಯವಸ್ಥೆಯನ್ನು ಬಳಗಾನೂರು ಪಟ್ಟಣ ಕೇಂದ್ರದಲ್ಲೇ ಮಾಡಬೇಕು ಎನ್ನುವುದು ಪಾಲಕರ ಬೇಡಿಕೆ.
ಮಲ್ಲಿಕಾರ್ಜುನ ಚಿಲ್ಕರಾಗಿ