ನಂಜನಗೂಡು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಂಚು ಹಾಕಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 10 ಮಂದಿ ಅಂತಾರಾಜ್ಯ ಡಕಾಯಿತರ ಗುಂಪನ್ನು ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ತಿಳಿಸಿದರು. ನಂಜನಗೂಡು ಡಿವೈಎಸ್‌ಪಿ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಹೆಗ್ಗಡದೇವನ ಕೋಟೆ ತಾಲೂಕಿನ ಹೊಸೂರು ಮಚ್ಚಾರು ಗ್ರಾಮದ ಅರುಣ ಅಲಿಯಾಸ್ ಟುಟು ಬಿನ್ ತಂಗಚ್ಚನ್, ಅಂತರಸಂತೆ ಹೋಬಳಿ ಡಿ.ಬಿ.ಕುಪ್ಪೆ ಗ್ರಾಮದ ಕಬೀರ್ ತಾಹ ಕಬೀರ್ ಬಿನ್ ಅಬುಬೂಕ್ಕರ್, ರಾಮು ಹೊಸೂರು, ಕೇರಳದವರಾದ ಮನೋಜ, ಪುರಕೊಂಡಕೊಲ್ಲಿ, ಕಲ್ಪೇಟ್, ಅಬ್ದುಲ್‌ಸಯಹೇಬ್ ಕಬೀರ್ ಕುನ್ನ ಮಂಗಲ, ಸಫಾನಿºನ್ ಮೊಯಿಯುದ್ದೀನ್ ಚುಂಡೆಲ್ ಕಲ್ಪೇಟ್, ಅಬ್ದುಲ್ ಸಮದ್ ಚುಂಡಲ್ ಕಲ್ಪೇಟ್, ರಮೀಶ ಸುದ್ದೀನ್ ಚುಂಡೆಲ್, ನೀಯಾಸ್ ಬಳ್ನಾರ್ ಕುನ್, ಮಹಮದ್ ಕೈಸ್ ಚುಂಡಾಲ್ ಬಂಧಿತರು. ಜೊತೆಯಲ್ಲಿದ್ದ ಲತೀಫ್, ನೌಫಲ್, ಸಾಬು ಪರಾರಿಯಾಗಿದ್ದಾರೆಂದರು.
ನಂಜನಗೂಡು, ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 212 ನ ಕಬಿನಿ ಬಲದಂಡೆ ಸೇತುವೆ ಬಳಿ ಭಾನುವಾರ ರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ನಂಜನಗೂಡು ಎಸ್‌ಪಿ ಸುಜೇತಾಮಹಮದ್‌ರ ನೇತೃತ್ವದಲ್ಲಿ ಸಿಪಿಐ ಗೊಪಾಲಕೃಷ್ಣರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದರು. ಬಂಧಿತರಿಂದ 5 ವಾಹನ, 9 ಮೊಬೈಲ್, 1.16 ಲಕ್ಷ ರೂ.ನಗದು, ದರೋಡೆಗೆ ಬಳಸಲಾಗುತ್ತಿದ್ದ ಒಂದು ಏರ್‌ಗನ್, ತಲ್ವಾರ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ನಂಜನಗೂಡು, ಮಂಡ್ಯ, ಕೇರಳದ ಕ್ಯಾಲಿಕಟ್ ಮಲ್ಲಪುರಂ ಠಾಣಾ ವ್ಯಾಪ್ತಿಯ ಹೆದ್ದಾರಿ ದರೋಡೆಗಳನ್ನು ಬೇಧಿಸುವಲ್ಲಿ ನಂಜನಗೂಡು ಪೊಲೀಸರ ತಂಡ ಯಶಸ್ಸು ಕಂಡಿದ್ದು ದಾಳಿಯಲ್ಲಿ ಭಾಗಿಯಾಗಿದ್ದವರಿಗೆ ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದರು.
ಅಪರ ಆರಕ್ಷಕ ಅಧಿಕ್ಷಕ ರುದ್ರಮುನಿ, ಸಹಾಯಕ ಆರಕ್ಷಕ ಆಧಿಕಾರಿ ಮಹಮದ್ ಸುಜೇತಾರ ನೇತೃತ್ವದಲ್ಲಿ ಸಿಪಿಐ ಗೋಪಾಲಕೃಷ್ಣ, ಪಿಎಸ್‌ಐ ಪುನೀತ್, ಸಿಬ್ಬಂದಿಗಳಾದ ಎಚ್.ಸಿ.ಕೃಷ್ಣ, ಸತೀಶ, ಅಬ್ದುಲ್ ಲತೀಫ್, ದೇವರಾಜ್, ಪ್ರಸನ್ನ ಕುಮಾರ, ಶ್ರೀಕಾಂತ್, ಸುರೇಶ, ಮಹೇಶ, ಅನಂತನಾಗ್ ದಾಳಿಯಲ್ಲಿ ಭಾಗವಹಿಸಿದ್ದರು.
ಬಂಧಿತರು ರಾಜ್ಯದಿಂದ ಕೇರಳಕ್ಕೆ ತೆರಳುವ ವ್ಯಾಪಾರಿ ವಾಹನಗಳ ಕುರಿತು ಖಚಿತ ಮಾಹಿತಿ ಪಡೆದು ನಿರ್ದಿಷ್ಠ ಜಾಗದವರಿಗೂ ಬೆನ್ನೆತ್ತಿ ಆಯಕಟ್ಟಿನ ಜಾಗದಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿ ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಬಲೆ ಬೀಸಲಾಗಿದೆ.
-ರವಿ ಚನ್ನಣ್ಣನವರ, ಎಸ್ಪಿ